• Tue. Jul 23rd, 2024

ರಂಗಭೂಮಿ ಬೇರಿಗೆ ದಕ್ಕಲಿ ನೆಲದ ರಾಜ್ಯೋತ್ಸವ!

Byadmin

Sep 9, 2021


ನಲವತ್ತೈದು ವರ್ಷಗಳ ಬಣ್ಣದ ನಂಟು,ಸಾವಿರಾರು ಧಾರವಾಹಿಗಳಲ್ಲಿ ಅಭಿನಯ,ಇನ್ನೂರೈವತ್ತು ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರ, ನಿಂತ ಜಾಗವನ್ನೆ ವೇದಿಕೆ ಮಾಡಿಕೊಂಡು ರಂಗಭೂಮಿಯನ್ನು ಬದುಕಾಗಿಸಿಕೊಳ್ಳುವುದರ ಜೊತೆಗೆ, ಬಣ್ಣದ ನಂಟಿನ ಸಾಂಗತ್ಯ ಬಯಸಿದವರನ್ನು ಜೊತೆಯಲ್ಲಿ ಕಟ್ಟಿಕೊಂಡು ಬದುಕು ಕಲ್ಪಿಸಿಕೊಟ್ಟ ಉತ್ಕೃಷ್ಟ ಕಲಾವಿದರು ಮೈಸೂರು ರಮಾನಂದ್ ಅವರು.


ಅಭಿನಯವೆನ್ನಿಸದ ಸಹಜತೆ ಅವರ ಪಾತ್ರಗಳಲ್ಲಿ ವೈಶಿಷ್ಟ್ಯ. ಹಾಸ್ಯದ ಲೇಪನ ಜೊತೆಗೆ ಪ್ರಸ್ತುತ ಸಮಸ್ಯೆಗಳ ಹೊಳಹೊಕ್ಕಿ ಚಿಂತನೆಗೆ ಉತ್ತರವಾಗುವ ಅವರ ಹಲವು ನಾಟಕಗಳು ನಮ್ಮ ಕಾಲಘಟಕ್ಕೆ ಅತ್ಯವಶ್ಯ.ಕುಡಿತ ಮಧ್ಯಪಾನ ದುಶ್ಚಟಕ್ಕೆ ದಾಸವಾಗಿರುವವರಿಗೆ ಅವರ ನಾಟಕ ನೋವಿಲ್ಲದ ಮನಸ್ಸಿನ ಚುಚ್ಚು ಮದ್ದು,ಸಮಾಜದ ಅಂಕು ಡೊಂಕು ನವಿರಾದ ಸರಿಪಡಿಸುವಿಕೆ.
ನಾಟಕದಲ್ಲಿ ಬಣ್ಣ ಹಚ್ಚುವುದರ ಜೊತೆಗೆ ಸುಮಾರು 28 ನಾಟಕಗಳ ಪುಸ್ತಕ ಬರೆದ ಜನ್ಮದಾತರು.ಯಾರ ಮುಂದೆಯೂ ಕೈ ಚಾಚದ ಸ್ವಾಭಿಮಾನ ಜನ್ಮತ: ಇವರ ಜೊತೆಯಾಗಿದೆ.ಇಪ್ಪತ್ತೆಂಟು ಪುಸ್ತಕಗಳಿಗೆ ಎರಡು ಲಕ್ಷ ತೊಂಬತ್ತೇಳು ಸಾವಿರ ಖರ್ಚಾಗಿದೆ..ಅದರ ಸಾಲದ ಜವಾಬ್ದಾರಿ ಹೆಗಲ ಮೇಲಿದೆ.ಸ್ವಂತ ಸೂರು ಮಾಡಿಕೊಳ್ಳುವ ಕನಸ್ಸಿದೆ, ‘ಗೆಜ್ಜೆ ಹೆಜ್ಜೆ’ ಬಣ್ಣದ ಮಾಸ ಪತ್ರಿಕೆ ಪ್ರಾರಂಭಿಸಿ ಒಂದೆರಡು ವರ್ಷ ನೆಡೆಸಿ ಆರ್ಥಿಕ ಸಂಕಷ್ಟಗಳ ಮಧ್ಯೆ ಪತ್ರಿಕೆ ನಿಲ್ಲಿಸಬೇಕಾಯಿತು.ಕೆಲವು ನಾಟಕ ಕೃತಿಗಳು ಸಿದ್ಧವಾಗಿವೆ ಮುದ್ರಣವಾಗಬೇಕು.ಇದರ ಜೊತೆಗೆ ಆರ್ಥಿಕ ಸಂಕಷ್ಟದಿಂದ ನಿಂತಿದ್ದ ‘ರಂಗವಿನೋದ’ ದ್ವಿಭಾಷ ಪತ್ರಿಕೆ ಪುನ: ಪ್ರಾರಂಭಿಸಲು ಸ್ನೇಹಿತರು ಸಮಾನ ಮನಸ್ಕರು ಜೊತೆಯಾಗಿದ್ದಾರೆ. ಜೊತೆಗೆ ಹಲವಾರು ಹೊಸ ಪ್ರತಿಭೆಗಳಿಗೆ ತಮ್ಮ’ಗೆಜ್ಜೆ ಹೆಜ್ಜೆ’ ರಂಗ ತಂಡದಲ್ಲಿ ಅವಕಾಶ ಕಲ್ಪಿಸುವುದರ ಜೊತೆಗೆ ಇಂದಿಗೂ ಸಾವಿರಾರು ಶಾಲಾ ಕಾಲೇಜಿನಲ್ಲಿ ನಾಟಕ ಪ್ರದರ್ಶನ ಮುಂದುವರೆದಿದೆ. ಏಳು ಸಾವಿರಕ್ಕೂ ಹೆಚ್ಚು ನಾಟಕ ಪ್ರದರ್ಶನ, ನೂರೈವತ್ತಕ್ಕೂ ಹೆಚ್ಚು ಹಸ್ತ ಪ್ರತಿ ಪದರ್ಶನ ಹೆಗ್ಗಳಿಕೆಯೆ ಸರಿ. ಬೀದಿ ನಾಟಕಗಳ ದಿಗ್ಗಜರಾದ ಎ.ಎಸ್.ಮೂರ್ತಿ ಅವರ ‘ಅವರಭಾವ’ ‘ಶುದ್ಧ ಶುಂಠಿ’ ಬೇಲೂರು ಕೃಷ್ಣಮೂರ್ತಿ ಅವರ ‘ತ್ಯಾಗಿ’ ಎಸ್.ಎಲ್. ಬೈರಪ್ಪ ಅವರು ಬರೆದಿರುವ ‘ಧಾಟು’ ಕಾದಂಬರಿಯಲ್ಲಿನ ಪ್ರಮುಖ ವೆಂಕಟರಮಣಯ್ಯನವರ ಪಾತ್ರ, ರಮಾನಂದ್ ಅವರ ಅಭಿನಯವನ್ನು ಎಸ್.ಎಲ್. ಭೈರಪ್ಪನವರು ಮೆಚ್ಚಿ ಪ್ರಶಂಸಿಸಿದ್ದಾರೆ.ಬೃಹತ್ ಮಹಾನಗರ ಪಾಲಿಕೆಯವರು ಆಯೋಜಿಸಿದ ಕ್ಷಯ ರೋಗದ ಕುರಿತು ನಾಟಕ ತಿಲಕ್ ನಗರದಲ್ಲಿ ಪ್ರದರ್ಶನ ಗೊಂಡಿತು..ಅಲ್ಲಿ ಉರ್ದು ಭಾಷಿಗರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಕಾರಣ ಉರ್ದುವಿನಲ್ಲಿ ನಾಟಕ ಪ್ರದರ್ಶನಗೊಂಡು ಹೆಚ್ಚು ಜನರಿಗೆ ತಲುಪುವುದರ ಜೊತೆಗೆ ಅರಿವು ಮೂಡಿಸುವ ಕಾರ್ಯವಾಯಿತು.ಇಂತಹ ಸಾಕಷ್ಟು ಸಾಮಾಜಿಕ ನಾಟಕಗಳು ರಮಾನಂದ್ ಅವರಿಂದ ಆಗಿದ್ದು ಶ್ಲಾಘನೀಯ.ಮಾಸ್ಟರ್ ಹಿರಣ್ಣಯ್ಯರಂತಹ ದೊಡ್ಡ ರಂಗಕರ್ಮಿಗಳು ನಾಟಕಗಳನ್ನು ನೋಡಿ ಬೆನ್ನು ತಟ್ಟಿದ್ದು ಇದೆ..ರಾಜಕಾರಣಿಗಳು, ಸಚಿವರು ಎಲ್ಲಾ ಕ್ಷೇತ್ರದಲ್ಲಿನ ಗಣ್ಯರು ಪ್ರಶಂಸೆಗೆ ಪಾತ್ರವಾಗಿರುವುದು ಸಂತೋಷ ಒಂದು ಕಡೆಯಾದರೆ..ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಏಳು ಭಾರಿ ಆಯ್ಕೆ ಆಗಿ ಆಯ್ಕೆ ಪಟ್ಟಿಯಲ್ಲಿನ ಹೆಸರು ಅಂತಿಮವಾಗಿ ಘೋಷಣೆ ಆಗದೆ ಇರುವುದು ನಿಜಕ್ಕೂ ಕಲೆ ಆರಾಧಿಸುವ ನಮ್ಮೆಲ್ಲರಿಗು ಬೇಸರ.
ಸಾವಿರಾರು ಪ್ರಶಸ್ತಿ ಫಲಕಗಳು ಸಂಘ -ಸಂಸ್ಥೆ ಜನರಿಂದ ರಮಾನಂದ್ ಸರ್ ಅವರಿಗೆ ಸಂದಿವೆ..ನಾಟಕ ಆಕಾಡೆಮಿ ಪ್ರಶಸ್ತಿಯನ್ನು ಗುರುತಿಸಿ ಕೊಟ್ಟರು ಬಿ. ವಿ.ರಾಜರಾಮ್ ಅವರು. ಕೆಂಪೇಗೌಡ ಪ್ರಶಸ್ತಿಯನ್ನು ಅಂದಿನ ಮೇಯರ್ ಆಗಿದ್ದ ಸಜ್ಜನರಾದ ವೆಂಕಟೇಶ್ ಅವರಿಂದ ಲಭಿಸಿದೆ. ಕರ್ನಾಟಕ ಸರ್ಕಾರ ನಮ್ಮ ನೆಲದ ಅತ್ಯುನತ್ತ ರಾಜೋತ್ಸವ ಪ್ರಶಸ್ತಿ ಕೊಡುವುದರ ಜೊತೆಗೆ ಪ್ರಶಸ್ತಿ ಘನತೆ ಹೆಚ್ಚುವುದಲ್ಲದೆ ಅರ್ಹರಿಗೆ ಸಿಗಬೇಕು ಎನ್ನುವ ಗಟ್ಟಿ ಧ್ವನಿ.ಕಲೆಗಾಗಿ ಬದುಕು ಸವೆಸುತ್ತಿರುವ ಬದುಕಿನ ಸವಿಯ ಕಂಪು ಎಲ್ಲೆಡೆ ಕನ್ನಡ ನೆಲದಲ್ಲಿ ಹರಡಿಸಿರುವ ರಮಾನಂದ್ ಅವರಿಗೆ ಈ ಬಾರಿ ಶ್ರೇಷ್ಠತೆಯ
ರಾಜ್ಯೋತ್ಸವ ಪ್ರಶಸ್ತಿ ಹಿರಿಮೆ ದಕ್ಕಲಿ ಎನ್ನುವುದು ‘ಕನ್ನಡ ವೃಕ್ಷದ’ ಆಶಯ..

ಅವರ ಬದುಕಿನ ಪುಟಗಳು,ಅವರ ಮಾತುಗಳು ನಿಮ್ಮ ಮುಂದೆ..

ನಾನು ಶಾಲಾ ದಿನಗಳಿಂದಲೂ ಪಠ್ಯ ಪುಸ್ತಕಕ್ಕಿಂತ ಕಥೆ ಪುಸ್ತಕ ನನನ್ನು ಹೆಚ್ಚು ಸೆಳೆದವು.ಮಯೂರದಲ್ಲಿನ ಚಂದಮಾಮನ ಕಥೆಗಳು ಶಾಲಾ ಕೊಠಡಿಯಲ್ಲಿ ಪುಸ್ತಕದ ಮಧ್ಯೆ ಶಿಕ್ಷಕರಿಗೆ ಗೊತ್ತಾಗದ ಹಾಗೆ ಇಟ್ಟುಕೊಂಡು ಓದುತ್ತಿದ್ದೆ. ಕಥೆಗಳಿಂದ ನಾಟಕದ ಸೆಳೆತ ಬಾಲ್ಯದಲ್ಲಿ ಹೆಚ್ಚಾಗಿ ಆಕರ್ಷಿತನಾದೆ. ಆಗ ಮಾಸ್ಟರ್ ಹಿರಣ್ಣಯ್ಯ ಅವರ ತಂದೆ ಮಾಡ್ತ ಇದ್ದ ದೇವದಾಸಿ ನಾಟಕದ ನಾಜೂಕಯ್ಯನ ಪಾತ್ರ ನೋಡುತ್ತ ನಾನೇ ಸ್ವತ: ಏಕಪಾತ್ರಭಿನಯ ಅಭ್ಯಾಸ ಮಾಡಿಕೊಂಡೆ.
ಎಪ್ಪತ್ತರ ದಶಕದಲ್ಲಿ ಸ್ನೇಹಿತರ ಜೊತೆಗೂಡಿ ನಾಟಕ ತಂಡ ಪ್ರಾರಂಭ ಮಾಡಿದೆ ‘ಸ್ನೇಹ ಕಲಾ ಮಿತ್ರ ಮಂಡಳಿ’ ಅದರಲ್ಲಿ ನಾಟಕಗಳು ಮಧು ಮದುವೆ, ಕಳ್ಳಬಟ್ಟಿ, ನೆಂಟರೋ ಗಂಟು ಕಳ್ಳರೋ, ಕಾಶಿಯಾತ್ರೆ, ಮರಣದಂಡನೆ ಈ ರೀತಿ ಹಲವಾರು ನಾಟಕಗಳನ್ನು ಮಾಡಿದ್ವಿ.ಎಂಬತ್ತೆರಡರಲ್ಲಿ ‘ಗೆಜ್ಜೆ ಹೆಜ್ಜೆ’ ರಂಗ ತಂಡವನ್ನ ಕಟ್ಟಿಕೊಂಡೆ. ಅದನ್ನು ಕಟ್ಟುವುದಕ್ಕೆ ಕಾರಣ ನಮ್ಮ ಅಣ್ಣ ಹಾಗೂ ಬಿ.ವಿ ಕಾರಂತರು,ಎಂ. ಎಸ್.ಸತ್ಯು ಅವರ ನಾಟಕಗಳಲ್ಲಿ ಅಭಿನಯಿಸುತ್ತ ಇದ್ದರು.ನಾನು ಅವರ ನಾಟಕಗಳಿಗೆ ಭಿತ್ತಿ ಪತ್ರ ಅಂಟಿಸುವುದರ ಜೊತೆಗೆ ಪ್ರಚಾರವನ್ನು ನೋಡಿಕೊಳ್ಳುತ್ತಿದ್ದೆ. ಅದು ಬೆಂಗಳೂರಿನಿಂದ ಮೈಸೂರಿನ ತನಕ ನಾಟಕ ಪ್ರಚಾರ ಕಾರ್ಯ ನನ್ನದಾಗಿತ್ತು. ಆರ್. ನಾಗೇಶ್ ಅವರ ಜೊತೆಗೂಡಿ ಪ್ರಚಾರದ ಅನುಭವವಾಯಿತು .ಆಗ ರಂಗಭೂಮಿಯಲ್ಲಿ ಅವರದು ದೊಡ್ಡ ಹೆಸರಿತ್ತು. ಬೇರೆ ನಾಟಕಗಳನ್ನು ಪ್ರಚಾರ ಮಾಡ್ತ ಇದ್ರು. ಬೀದಿ ನಾಟಕಗಳ ಜೊತೆಗೆ ನಾಟಕಗಳಲ್ಲಿ ಸಿಗುತ್ತಿದ್ದ ಅವಕಾಶಗಳನ್ನು ಬಿಡದೆ ಮಾಡುತ್ತ ಬಂದೆ. ನಮ್ಮ ತಂಡದ ನಾಟಕದಲ್ಲಷ್ಟೆ ಅಲ್ಲದೆ ಹವ್ಯಾಸಿ ರಂಗ ತಂಡದಲ್ಲಿಯೂ ಅಭಿನಯಿಸುತ್ತ ಬಂದೆ. ಆಗ ರಾಜ್ಯೋತ್ಸವ, ಗಣಪತಿ, ಶಿವರಾತ್ರಿ, ಹಲವು ಹಬ್ಬದಂದು ಹೆಚ್ಚು ನಾಟಕಗಳು ನೆಡೀತಾ ಇತ್ತು.ನನಗೆ ಅರಿವಿಲ್ಲದೆ ಬಣ್ಣದ ಬದುಕಲ್ಲೆ ಬದುಕು ಕಟ್ಟಿಕೊಂಡೆ. ಯಾವ ಕೆಲಸಕ್ಕೂ ಹೋಗಲಿಲ್ಲ. ರಂಗದ ನಂಟು ನಿರಂತರವಾಗಿ ಬೆಳೆಯಿತು. ನನ್ನ ತಾಯಿ ನನ್ನ ‘ಕಾಶಿಯಾತ್ರೆ’ ನಾಟಕ ನೋಡಿ ಸಂತೋಷ ಪಟ್ಟಿದ್ರು. ಇನ್ನು ನಮ್ಮ ತಂದೆ ನೋಡಿದ ನಾಟಕ ‘ನಾನಿನ್ನು ಸತ್ತಿಲ್ಲ’ ಅದು ಕಂದಾಯ ಇಲಾಖೆಯಲ್ಲಿನ ಬ್ರಷ್ಟಾಚಾರ ಬಯಲು ಮಾಡುವ, ವಿಡಂಬನೆ ಜೊತೆಗೆ ಹಾಸ್ಯ ನಾಟಕ..ನಮ್ಮ ತಂದೆ ಬಹಳ ಇಷ್ಟ ಪಟ್ಟರು. ನಾನು ನಮ್ಮ ತಂದೆಗೆ ನಾಟಕಗಳು ಮಾಡಬೇಕು ಹೆಚ್ಚು ಜನ ಸಂಪರ್ಕ ಬೆಳೆಯುತ್ತೆ ಅಂದಿದ್ದೆ.ನಮ್ಮ ತಂದೆ ಆ ಕಾಲದಲ್ಲಿ ಗ್ರಾಮ ಲೆಕ್ಕಿಗ ಅಧ್ಯಕ್ಷರಾಗಿದ್ದರು. ಅವರಿಗೆ ಜನ ಸಂಪರ್ಕ ಸ್ನೇಹಿತರ ಬಳಗ ಹೆಚ್ಚಿತ್ತು. ಅವರಿಗೆ ನಾಟಕಕ್ಕೆ ಬರಲು ಟಿಕೆಟ್ ತೆಗೆದಿಟ್ಟುಕೊಂಡಿದ್ದರು.ಎಂಬತ್ತಾರನೆಯ ಇಸವಿಯಲ್ಲಿ ನಾನು ನನ್ನ ಸ್ನೇಹಿತರ ಜೊತೆಗೂಡಿ ಕರ್ನಾಟಕದ ರಂಗಭೂಮಿ ಇತಿಹಾಸ ಹಾಗೂ ಭಾರತದ ರಂಗಭೂಮಿ ಇತಿಹಾಸದಲ್ಲಿ ಪ್ರಪ್ರಥಮವಾಗಿ ನಾನು ನನ್ನ ಆತ್ಮೀಯ ಮಿತ್ರ ಬಿ.ಉದಯ್ ಕುಮಾರ್ ಇಬ್ಬರು ಮೂರು ತಿಂಗಳ ಕಾಲ ಸತತವಾಗಿ ನಾಟಕ ಮಾಡ್ತ ಕರ್ನಾಟಕದ ಉದ್ಧಗಲಕ್ಕೂ ಹೋಗಿದ್ದು ದಾಖಲೆ. ಪ್ರೇಕ್ಷಕರನ್ನು ನಂಬಿ ಮೂನೂರಕ್ಕೂ ಹೆಚ್ಚು ನಾಟಕಗಳನ್ನು ಗ್ರಾಮೀಣ ಪ್ರದೇಶದಲ್ಲಷ್ಟೆ ಅಲ್ಲದೆ ಕುಗ್ರಾಮ, ಹೋಬಳಿ ಮಟ್ಟದಲ್ಲಿ ನಾಟಕ ಮಾಡಿದ್ದು ಆ ಕಾಲದಲ್ಲಿ ಪ್ರಮುಖ ಪತ್ರಿಕೆಗಳಲೆಲ್ಲಾ ಸುದ್ದಿಯಾಯಿತು.ಆಗ ಬೆಂಗಳೂರಿನ ನೃಪತುಂಗ ರಸ್ತೆ ಹತ್ತಿರ ನಾಟಕ ಮಾಡಿದ್ದು ಕನ್ನಡ ಪ್ರಭ ಪತ್ರಿಕೆಯಲ್ಲಿ ಆಗಿನ ಪತ್ರಕರ್ತರಾದ ಜಯರಾಮ್ ಅಡಿಗರು ನಾಟಕ ಅಂದ್ರೆ ಹೀಗಿರಬೇಕು ಅತ್ಯುತ್ತಮ ಕಲಾವಿದರು ಅಂತ ಬರೆದಿದ್ದನ್ನು ಡಾ.ರಾಜ್ ಕುಮಾರ್ ಅವರು ಓದಿ ನಾನು ಆ ನಾಟಕ ನೋಡಬೇಕು ಅಂತ ಹೊನವಳ್ಳಿ ಕೃಷ್ಣ ಅವರ ಹತ್ತಿರ ಹೇಳಿದ್ದರಂತೆ.ಹೊನವಳ್ಳಿ ಕೃಷ್ಣ ಅವರು ನಮ್ಮನ್ನು ಚಾಮುಂಡೇಶ್ವರಿ ಸ್ಟುಡಿಯೋಗೆ ಕರೆದುಕೊಂಡು ಹೋದರು ಅಲ್ಲಿ ರಾಜ್ ಕುಮಾರ್ ಅವರು ಇದ್ದರು ನಾವು ನಮಸ್ಕಾರ ಸರ್ ಅಂದಾಗ..ನಮಸ್ಕಾರ ಬನ್ನಿ ,ನಿಮ್ಮನ್ನು ನೋಡಿ ಬಹಳ ಸಂತೋಷವಾಯಿತು ಅಂದರು..ನಾವು ನಿಮ್ಮನ್ನು ನೋಡಿ ಸಂತೋಷವಾಯಿತು ಸರ್ ಅಂದ್ವಿ.
ರಾಜ್ ಕುಮಾರ್ ಅವರು ನಾಟಕ ಹೇಗೆ ಮಾಡ್ತೀರ ? ಅಂದ್ರು. ನಾನು ಸರ್ ನಾವು ಬೀದಿ ನಾಟಕ ಮಾಡೋದು ಅಲ್ಲಿ ಎಲ್ಲರು ಒಂದೆ ಅಧಿಕಾರಿ ದಾರಿಹೋಕ, ಕಡಲೆಕಾಯಿ ಮಾರುವವ, ಐ.ಎ.ಎಸ್ ಅಧಿಕಾರಿ ಯಾರೇ ಗೊತ್ತು ಗುರಿ ಇಲ್ಲದವರು ನೆಲದಲ್ಲಿ ಕೂತು ನಾಟಕ ನೋಡ್ತಾರೆ. ನಾಟಕ ನಾಟಕ ಬೀದಿ ನಾಟಕ ದೀಪವಿಲ್ಲ ದೀಪವಿಲ್ಲ ಸ್ಟೇಜು ಬಣ್ಣ ಒಂದು ಇಲ್ಲ. ನಿಂತ ನೆಲದ ಮೇಲೆ ನೀವು ಕುಂತು ನೋಡೋಕೆ ಎಲ್ಲಾ ಬನ್ನಿ ಬನ್ನಿ ಅಂತ ಶುರು ಮಾಡ್ತೀವಿ ಸರ್ ಅಂದಾಗ ರಾಜ್ ಕುಮಾರ್ ಅವರು ಕುರ್ಚಿ ತೆಗೆದು ನೆಲದ ಮೇಲೆ ಕುಳಿತರು.ನಾಟಕ ನೋಡಿ ಪ್ರೋತ್ಸಾಹಿಸಿದರು. ಮುಂದೆ ನನಗೆ ಡಾ.ರಾಜ್ ಕುಮಾರ್ ಅವರು ನಾಟಕ ನೋಡಿ ಮೆಚ್ಚಿದ್ದಾರೆ ಅಂತ ಚಿತ್ರರಂಗದಲ್ಲಿ ಅವಕಾಶಗಳು ಸಿಕ್ಕವು.

ಇನ್ನು ನಮ್ಮ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಚಿತ್ರಗಳಲ್ಲಿ ಅವಕಾಶಗಳು ಸಿಕ್ಕವು. ಅವರು ನಿರ್ದೇಶಕರಿಗೆ ರಮಾನಂದ್ ಅವರು ಒಳ್ಳೆಯ ಕಲಾವಿದರು ಅವರಿಗೆ ಅವಕಾಶಗಳು ಸಿಗಬೇಕು ಅಂತ ಹೇಳಿ ಹಲವು ಚಿತ್ರಗಳಲ್ಲಿ ಅವಕಾಶಗಳು ಸಿಗುವಂತೆ ಮಾಡಿದರು.ನಂತರ ಶಂಕರ್ ನಾಗ್ ಅವರು 89 ರಲ್ಲಿ ಅವರ ಚಿತ್ರದಲ್ಲಿ ಪಾತ್ರಕ್ಕೆ ನನ್ನ ಬರ ಮಾಡಿಕೊಂಡರು.
‘ಆಟ ಬೊಂಬಾಟ’ ಚಿತ್ರ ರಕ್ಷಿತ ಅವರ ತಂದೆ ಗೌರಿ ಶಂಕರ್ ಅವರ ನಿರ್ದೇಶನ ಪಾತ್ರಕ್ಕೆ ನೀವು ದಪ್ಪ ಆಗಬೇಕು ಅಂತ ಹೇಳಿದ್ರು. ನಾನು ತುಂಬಾ ಸಣ್ಣ ಇದ್ದೆ. ನಾನು ದಪ್ಪ ಆಗಬೇಕಲ್ಲ ಏನು ಮಾಡೋದು ಅಂತ ಕೆಲವರನ್ನು ಕೇಳಿದಾಗ..ಬಿಯರ್ ಕುಡಿದ್ರೆ ದಪ್ಪ ಅಗ್ತಾರೆ ಅಂದ್ರು. ನನಗೆ ಅಭ್ಯಾಸ ಇರಲಿಲ್ಲ.ಆದರೆ ಚಿತ್ರದಲ್ಲಿ ಅವಕಾಶ ಸಿಗುತ್ತೆ ಅಂತ ತಿಂಗಳಾನುಗಟ್ಟಲೆ ಕುಡಿದೆ ಆದರೆ ದಪ್ಪ ಅಗಲಿಲ್ಲ..ಉಷ್ಣ ಆಗಿ ಆರೋಗ್ಯ ಕೈ ಕೊಟ್ಟಿ ಗುಳ್ಳೆಗಳು ಎದ್ದವು. ಗೌರಿ ಶಂಕರ್ ಅವರು ಕರೆ ಮಾಡಿ ಬನ್ನಿ ಅಂದರು ನಾನು ಆರೋಗ್ಯ ಕೈ ಕೊಟ್ಟಿರುವುದು ತಿಳಿಸಿ. ಮುಂದಿನ ವಾರ ಬರುತ್ತೀನಿ ಎಂದೆ. ಅವರು ಸರಿ ಅಂದರು.ಮುಂದಿನ ವಾರ ಹೋದಾಗ ಶಂಕರ್ ನಾಗ್ ಅವರ ಜೊತೆಗೆ ಪುಟ್ಟ ಪಾತ್ರ ಅಭಿನಯಿಸುವ ಅವಕಾಶ ಸಿಕ್ಕಿತು. ಚಿತ್ರೀಕರಣದ ಸಮಯದಲ್ಲಿ ಜೋರು ಮಳೆ ಬಂದು ನಿಲ್ಲಿಸಿದ್ರು. ಆಗ ಶಂಕರ್ ನಾಗ್ ಅವರು ಗೌರಿ ಶಂಕರ್ ಅವರ ಹತ್ತಿರ ಹೋಗಿ ಸರ್ ಮಳೆ ಜೋರಾಗಿದೆ..ಸಮಯ ಸುಮ್ಮನೆ ವ್ಯರ್ಥ ಆಗ್ತಾ ಇದೆ. ಒಂದು ನಾಟಕ ಮಾಡೋಣ ಸರ್ ಅಂದರು.ನಾನು ನಾಟಕ ಮಾಡ್ತೀನಿ ಅಂದೆ. ಎಷ್ಟು ಜನ ಮಾಡ್ತೀರಾ ಅಂದರು. ಇಬ್ಬರೆ ಮಾಡ್ತೀವಿ ಸರ್ ಅಂದ್ವಿ ಆಯ್ತು ಮಾಡಿ ಅಂದರು.ನಮಗೆ ಸಂತೋಷ ಆಯಿತು.ಸರ್ ಇನ್ನು ಒಂದು ನಾಟಕ ಮಾಡ್ತೀವಿ ಸರ್ ಅಂದಾಗ ಮಾಡಿ ಅಂದರು.ಮೊದಲೆ ಶಂಕರ್ ನಾಗ್ ಅವರಿಗೆ ನಾಟಕ ಅಂದ್ರೆ ಪ್ರಾಣ. ಆ ಚಿತ್ರದ ನಂತರ ನನಗೆ ರಮೇಶ್ ಅರವಿಂದ್ ಅವರು ಕೆಂಪು ಗುಲಾಬಿ ಚಿತ್ರದಲ್ಲಿ ದೀರೇಂದ್ರ ಗೋಪಾಲ್ ಅವರ ಜೊತೆ ಅಭಿನಯಿಸುವ ಅವಕಾಶ ಕಲ್ಪಿಸಿಕೊಟ್ಟರು. ನಂತರ ‘ಹೂವೊಂದು ಬೇಕು ಬಳ್ಳಿಗೆ’ ಹೀಗೆ ಒಂದರ ನಂತರ ಮೊತ್ತೊಂದು ಇನ್ನೂರೈವತ್ತು ಚಿತ್ರಗಳು ಆದವು. ಎಷ್ಟೇ ಚಿತ್ರಗಳಲ್ಲಿ ಅಭಿನಯಿಸಿದರು..ನಾಟಕಗಳಲ್ಲಿ ಅಭಿನಯಿಸುವುದು ಬಿಡಲಿಲ್ಲ.ಕರ್ನಾಟಕ ಅಷ್ಟೇ ಅಲ್ಲದೆ ಮುಂಬೈ, ತಮಿಳುನಾಡು,ಕೇರಳ,ದೆಹಲಿ, ಮಹಾರಾಷ್ಟ್ರ ಭಾರತದ ಪ್ರಮುಖ ಭಾಗಗಳಲ್ಲಿ ನಾಟಕಗಳನ್ನು ಮಾಡಿದ್ವಿ. ಅದರಿಂದ ಒಬ್ಬ ನಾಟಕಕಾರನಾಗಿ ಗುರುತಿಸಿಕೊಂಡೆ. ಅತೀ ಹೆಚ್ಚು ಪತ್ರಿಕೆಗಳು ನನ್ನ ಕುರಿತು ಮುಖ ಪುಟದಲ್ಲಿ ಬರೆದಿದ್ದಾರೆ..ನಾನು ಚಿತ್ರಗಳನ್ನು ಬಿಟ್ಟಿದ್ದೀನಿ ಹೊರತು ಸಿಕ್ಕ ನಾಟಕಗಳಲ್ಲಿನ ಅವಕಾಶಗಳು ಬಿಡಲಿಲ್ಲ. ಇದರ ಮಧ್ಯೆ ಮಾತಾಡೋ ಗೊಂಬೆ ಇಟ್ಟುಕೊಂಡು ನಾಮಕರಣ, ಮದುವೆ ಸಮಾರಂಭ,ಹಲವು ಕಡೆ ಕಾರ್ಯಕ್ರಮಗಳನ್ನು ಕೊಟ್ಟಿದ್ದೀನಿ. ನಂತರ ಒಬ್ಬನೆ ಕಾರ್ಯಕ್ರಮ ಕೊಡುವುದಕ್ಕಿಂತ ಬೇರೆಯವರಿಗೆ ನನ್ನ ಜೊತೆಯಲ್ಲಿ ಅವಕಾಶ ಕೊಡಬೇಕೆಂದು ತೀರ್ಮಾನಿಸಿ.ಮಾತಾಡೋ ಗೊಂಬೆ ಬಿಟ್ಟೆ.ನಾಲ್ಕಾರು ಜನರಿಗೆ ಜೀವನ ಕೊಡುವುದರ ಜೊತೆಗೆ ಅವರ ಪ್ರತಿಭೆಗಳು ಹೊರ ಬರಬೇಕೆಂದು ರಂಗಭೂಮಿ ಅಪ್ಪಿಕೊಂಡು ಅದರ ಜೊತೆಗೆ ಇರುವುದರಲ್ಲಿ ಸಂತೋಷದಿಂದ ತೃಪ್ತನಾದೆ. ಸ್ವಂತ ಸೂರಿಲ್ಲದೆ ಹೋದರು ಸುಖವಾಗಿ ಜೀವನ ನೆಡೆಸುತ್ತಾ ಇದ್ದೀನಿ.


ಇದರ ಜೊತೆಗೆ ಸಾಹಿತ್ಯದ ಅಭಿರುಚಿಯು ಜೊತೆಯಾಗಿದೆ. ‘ಟ್ರಾಪಿಕ್ಕಾಯಣ’ ಅರ್ಥಾತ್ ಸುಖ ಸಂಚಾರಕ್ಕೆ ಮೂರೆ ಸೂತ್ರಗಳು ನಮ್ಮ ವಿಷ್ಣುವರ್ಧನ್ ಅವರು ಬೆನ್ನುಡಿ ಬರೆದು ಇಂತಹ ಪುಸ್ತಕಗಳು ನಮ್ಮ ಕನ್ನಡದಲ್ಲಿ ಹೆಚ್ಚು ಬರಬೇಕೆಂದು ಹಾರೈಸಿದ್ದಾರೆ.ಮುನ್ನುಡಿಯನ್ನು ಕರ್ನಾಟಕ ಸರ್ಕಾರದ
ಸಂಚಾರ ಸಲಹೆಗಾರರಾಗಿರುವ ಶ್ರೀ ಹರಿ ಅವರು ಬರೆದಿದ್ದಾರೆ.
ಅದೇ ರೀತಿ ಮತ್ತೊಂದು ‘ಸಂಚರಾಯಣ’ ನಾಟಕ ನೋಡಿದ ವೈಟ್ ಫೀಲ್ಡ್ ನ ಪ್ರಾದೇಶಿಕ ಸಾರಿಗೆ ಅಧಿಕಾರಿ (RTO) ಗಾಯತ್ರಿ ಮೇಡಮ್ ಈ ನಾಟಕ ತುಂಬಾ ಚೆನ್ನಾಗಿದೆ ಮುದ್ರಣ ಮಾಡಿಸಿ ಎಂದರು.ಮಾಡಿಸಬೇಕು ಮೇಡಮ್ ಸಧ್ಯ ಹಣವಿಲ್ಲ ಎಂದೆ. ಆಗ ಎಷ್ಟಾಗುತ್ತೆ ಅಂದರು ಎರಡು ಸಾವಿರ ಪ್ರತಿಗೆ ನಲವತ್ತು ಸಾವಿರ ಆಗುತ್ತೆ ಎಂದೆ.ಅವರು ಮಾರನೆಯ ದಿನ ಕರೆ ಮಾಡಿ ನಲವತ್ತು ಸಾವಿರ ಕೊಟ್ಟರು..ನಾನು ಪ್ರತಿ ಮುದ್ರಿಸಿ ಕೆಲವು ಪ್ರತಿ ಗ್ರಂಥಾಲಯ ಹಾಗೂ ಉಚಿತವಾಗಿ ಓದುವ ಆಸಕ್ತರಿಗೆ ಕೊಟ್ಟೆ. ಅವರೆ ನನಗೆ ಉಚಿತವಾಗಿ ಕೊಟ್ಟಿರುವಾಗ ನಾನು ಹಣಕ್ಕೆ ಮಾರುವುದು ಸರಿ ಇಲ್ಲವೆಂದು ಹಾಗೆ ಮಾಡಿದೆ.ಸಾವಿರಾರು ಪತ್ರಿಕೆಗಳಲ್ಲಿ ಬಂದಿರುವ ಲೇಖನಗಳನ್ನು ಇಟ್ಟುಕೊಂಡು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರಿಗೆ ಕೊಟ್ಟರೆ ಅನುದಾನ ಎಪ್ಪತ್ತೈದು ಸಾವಿರದವಾರೆಗೂ ಕೊಡುತ್ತಾರೆ ಸಹಾಯವಾಗುತ್ತೆ, ಕೊಟ್ಟಿ ಬರೋಣ ಅಂತ ಹೊರಟ್ಟಿದ್ದಾಗ ನನ್ನ ಎದುರಿಗೆ ಸಿಕ್ಕ ನನ್ನ ಆತ್ಮೀಯರಾದ ಗಂಗಾಧರ್ ಮೊದಲಿಯರ್ ಅವರು ಅದನ್ನು ನೋಡಿ ಇದೇನ್ರಿ ಇಷ್ಟೊಂದು ಪತ್ರಿಕೆಗಳು ಬರೆದಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿಗೆ ಕಳಿಸಿಕೊಡಿ ಇಷ್ಟೆಲ್ಲಾ ಮಾಡಿದ್ದೀರ ಅಂದರು..ಸುಮಾರು ಏಳು ವರ್ಷದಿಂದ ಕಳಿಸ್ತಿದ್ದೀನಿ ಅಂತ ನಗುತ್ತ ನನ್ನ ಮುಂದೆ ಬಿಚ್ಚಿಟ್ಟರು.
ರಂಗ ಮಂಟಪದ ದೇವಸ್ಥಾನದಂತಿರುವ ಅಂಗಳದಲ್ಲಿ ತುಂಬಿರುವ ಪ್ರಶಸ್ತಿ ಫಲಕಗಳು, ಸಾಧನೆಯ ಬದುಕು ನಮ್ಮನ್ನು ನೆನಪಿಸಿದರೆ..ಅತ್ಯಂತ ಸರಳವಾಗಿ ಬದುಕಿನ ಚಿತ್ರಣ ನನ್ನ ಮುಂದೆ ಬಿಚ್ಚಿಡುತ್ತ ಹೊರಟರು..
ಇಷ್ಟೆಲ್ಲ ದಾಖಲೆಗಳ ನಡುವೆ ಎಲ್ಲರಿಗು ಚಿರ ಪರಿಚಿತ ಮೈಸೂರು ರಮಾನಂದ್ ಸರ್ ಅವರನ್ನು ಸರ್ಕಾರ ಮರೆಯದಿರಲಿ.


ವಿನೋದ್ ಕುಮಾರ್. ಬಿ✍

Leave a Reply

Your email address will not be published. Required fields are marked *