• Tue. Jul 16th, 2024

ಪಶ್ಚಾತಾಪದ ಕುರುಹುಗಳಿಲ್ಲದೆ ಚಂದ್ರಶೇಖರ ಗುರೂಜಿಯ ಕಗ್ಗೊಲೆ

Byadmin

Jul 10, 2022ಸರಳ ವಾಸ್ತು ಖ್ಯಾತಿಯ ಮತ್ತು ಸರಳ ಜೀವನ ಟಿವಿ ವಾಹಿನಿಯ ಸಂಸ್ಥಾಪಕರಾಗಿದ್ದ ಚಂದ್ರಶೇಖರ್ ಗುರೂಜಿಯವರನ್ನು ಇದೇ ದಿನಾಂಕ 5 ರಂದು ಹುಬ್ಬಳ್ಳಿಯ ಪ್ರೆಸಿಡೆನ್ಸಿ ಹೋಟೆಲ್ ನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದ್ದು ಇಡೀ ಕರ್ನಾಟಕವೇ ಬೆಚ್ಚಿ ಬೀಳುವಂತಾಗಿದೆ. ಹತ್ಯೆ ಮಾಡಿದ ನಾಲ್ಕು ಗಂಟೆ ಒಳಗಡೆ ಆರೋಪಿಗಳನ್ನು ಬಂಧಿಸಲಾಗಿದ್ದು, ಆರೋಪಿಗಳು ಚಂದ್ರಶೇಖರ್ ಗುರೂಜಿಯವರ ಸಂಸ್ಥೆಯ ಮಾಜಿ ಉದ್ಯೋಗಿಗಳಾಗಿದ್ದು ಕೊಲೆಗೆ ಆಸ್ತಿಯ ವಿಚಾರವಾಗಿ ವಿವಾದವೇ ಎಂದು ಹೇಳಲಾಗಿದೆ. ಇನ್ನು ಚಂದ್ರಶೇಖರ್ ಗುರೂಜಿಯವರು ಮೂಲತಹ: ಬಾಗಲಕೋಟೆಯವರಾಗಿದ್ದು ಸಿವಿಲ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದು, ಮುಂಬೈಗೆ ಹೋಗಿ ಕಾಂಟ್ರಾಕ್ಟರ್ ಕೆಲಸ ಆರಂಭಿಸಿದರು.

ಆದರೆ ಬಾಲ್ಯದಿಂದಲೂ ಆಧ್ಯಾತ್ಮಿಕ ಕಡೆ ಒಲವು ಹೊಂದಿದ್ದ ಗುರೂಜಿ ಸಹಜವಾಗಿಯೇ ತಮ್ಮ ವೃತ್ತಿಯ ಒಂದು ಭಾಗವಾಗಿದ್ದ, ಮತ್ತು ಭಾರತೀಯ ಸಂಸ್ಕೃತಿಯ ಪುರಾತನ ವಿದ್ಯೆಯಾದ ವಾಸ್ತು ಶಾಸ್ತ್ರದ ಕಡೆಗೆ ಒಲವು ಬೆಳೆಸಿ ಅದರ ಸಂಪೂರ್ಣ ಅಧ್ಯಯನ ನಡೆಸಿ, ಮುಂದೆ ಸಿಂಗಾಪುರ್ ಗೆ ಪ್ರಯಾಣ ಬೆಳೆಸಿ ಸಿಂಗಾಪುರ್ ನಲ್ಲಿ ವಾಸ್ತು ಶಾಸ್ತ್ರ ಇನ್ನಷ್ಟು ಆಳವಾಗಿ ಅಧ್ಯಯನ ಮಾಡಿ ಮುಂಬೈಗೆ ವಾಪಸ್ ಬಂದು ಸರಳ ವಾಸ್ತುವಿನ ಹೆಸರಿನ ಸಂಸ್ಥೆಯನ್ನು ಪ್ರಾರಂಭಿಸಿ ವಾಸ್ತು ದೋಷಗಳಿಗೆ ಸಲಹೆಗಾರರಾಗಿ ವೃತ್ತಿಯನ್ನು ಆರಂಭಿಸಿದರು. ಹೀಗೆ ವಾಸ್ತು ಶಾಸ್ತ್ರದ ಸಲಹೆಗಾರರಾದಂತಹ ಚಂದ್ರಶೇಖರ್ ಗುರೂಜಿ ಸಾಕಷ್ಟು ಜನರ ಸಮಸ್ಯೆಗಳನ್ನು ಪರಿಹರಿಸಿ, ದೇಶ ವಿದೇಶಗಳಲ್ಲಿ ಖ್ಯಾತಿ ಹೊಂದಿದ್ದರು.ಅಲ್ಲದೆ ನೂರಾರು ಜನರಿಗೆ ತಮ್ಮ ಸಂಸ್ಥೆಯಲ್ಲಿ ಉದ್ಯೋಗ ಕಲ್ಪಿಸಿದ್ದರು. ಕೊಲೆಯ ಆರೋಪಿಗಳಾದ ಮಂಜುನಾಥ್ ಮತ್ತು ಮಹಾಂತೇಶ್ ಹಾಗೂ ಮಹಾಂತೇಶನ ಹೆಂಡತಿ ವನಜಾಕ್ಷಿ ಸಹ ಇದೇ ಸಂಸ್ಥೆ ಉದ್ಯೋಗಿಗಳಾಗಿದ್ದು ಇತ್ತೀಚಿಗೆ ಉದ್ಯೋಗವನ್ನು ತೊರೆದಿದ್ದರು. ಚಂದ್ರಶೇಖರ್ ಗುರೂಜಿ ಅವರು ಮಹಾಂತೇಶ್ ಮತ್ತು ಆತನ ಹೆಂಡತಿ ಹೆಸರಿಗೆ ಆಸ್ತಿಯನ್ನು ನೋಂದಾಯಿಸಿದ್ದು ಇವರು ಉದ್ಯೋಗ ತೊರೆದ ನಂತರ ಸದರಿ ಆಸ್ತಿಯನ್ನು ವಾಪಸ್ ಪಡೆಯಲು ಪ್ರಯತ್ನಿಸುತ್ತಿದ್ದರು ಇದೇ ಕಾರಣಕ್ಕೆ ವಿವಾದ ಉಂಟಾಗಿ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಕೊಲೆಗೆ ನಿಜವಾದ ಕಾರಣವನ್ನು ಪೊಲೀಸರಷ್ಟೇ ಬಯಲು ಮಾಡಬೇಕಿದೆ.

ಚಂದ್ರಶೇಖರ್ ಗುರೂಜಿ ಅವರು ಸಾವಿರಾರು ಕೋಟಿ ಆಸ್ತಿಯ ಒಡೆಯರಾಗಿದ್ದು ಅಲ್ಲದೆ ವಾಸ್ತು ಶಾಸ್ತ್ರದಲ್ಲಿ ಪ್ರಖ್ಯಾತಗಳಿಸಿದ್ದು ಅಂತಹ ವ್ಯಕ್ತಿಯ ಕೊಲೆ ಮಾಜಿ ಉದ್ಯೋಗಿಗಳಿಂದ ಹಾಡ ಹಗಲೆ ನಡೆದು ಹೋಗಿರುವುದು ನೋಡಿದರೆ ಬಲವಾದ ಒಂದು ಕಾರಣ ಅಥವಾ ಕಾಣದ ಕೈಗಳು ಕೆಲಸ ಮಾಡಿರುವ ಸಾಧ್ಯತೆಗಳಿವೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಚಾರವೇನೆಂದರೆ?, ಆರೋಪಿಗಳಿಗೆ ತಾವು ಮಾಡುತ್ತಿರುವ ಕೃತ್ಯದ ಕುರಿತು ಸಂಪೂರ್ಣ ಅರಿವಿದ್ದು ಅದರ ಪರಿಣಾಮ ಏನಾಗಬಹುದೆಂದು ತಿಳಿದು ಸಹ ಈ ರೀತಿ ಕೃತ್ಯವನ್ನು ಮಾಡಿರುವುದರ ಹಿಂದೆ ಕೇವಲ ಈ ಮೂರು ವ್ಯಕ್ತಿಗಳು ಇರದೆ ತಂಡದ ರೂಪದಲ್ಲಿ ಕೃತ್ಯ ಎಸೆಗಿರುವ ಸಾಧ್ಯತೆಯಿದ್ದು ಎಲ್ಲ ದೃಷ್ಟಿಕೋನ ಗಳಿಂದ ತನಿಖೆ ಅಗತ್ಯತೆ ಇದೆ.

ಇನ್ನು ಭಾರತದಂತಹ ದೇಶದಲ್ಲಿ ರಾಜಕಾರಣಿಗಳು ಸರ್ಕಾರಿ ಅಧಿಕಾರಿಗಳು, ಉದ್ಯಮಪತಿಗಳು ತೆರಿಗೆ ತಪ್ಪಿಸುವ ಹುನ್ನಾರದಿಂದ ತಾವು ಗಳಿಸಿದ ಆಸ್ತಿಯನ್ನು ಸಂಬಂಧಿಕರ ಹೆಸರಿಗೆ ತಮ್ಮ ಸಂಸ್ಥೆಯ ಉದ್ಯೋಗಿಗಳ ಹೆಸರಿಗೆ ಅಥವಾ ಮಿತ್ರರ ಹೆಸರಿಗೆ ನೋಂದಾಯಿಸುವುದು ಸರ್ವೇ ಸಾಮಾನ್ಯವಾಗಿದೆ. ಆದರೆ ಆಸ್ತಿ ನೋಂದಾಯಿಸಿಕೊಂಡ ವ್ಯಕ್ತಿಗಳು ತಮ್ಮ ನಿಯತ್ತನ್ನು ಬದಲಿಸಿ ಆಸ್ತಿ ಮಾಲಿಕರಿಗೆ ಆಸ್ತಿಯನ್ನು ವಾಪಸ್ ಕೊಡೋದು ಸಹ ಖಾತ್ರಿ ಇರುವುದಿಲ್ಲ.

ಗುರುಜಿಯವರ ಹತ್ಯೆಗೆ ಬೇನಾಮಿ ಆಸ್ತಿಯ ವಿವಾದವೇ ಕಾರಣವಾಗಿದ್ದರೆ… ಈ ರೀತಿ ಬೇನಾಮಿ ಆಸ್ತಿ ಹೊಂದುವ ಜನರಿಗೆ ಇದೊಂದು ಎಚ್ಚರಿಕೆ ಗಂಟೆಯಾಗಿದೆ. ಅದೇನೇ ಇರಲಿ ಸಮಾಜಕ್ಕೆ ಇನ್ನಷ್ಟು ಒಳಿತನ್ನು ಮಾಡಬೇಕಾಗಿದ್ದ ಒಬ್ಬ ವ್ಯಕ್ತಿಯನ್ನು ಕಳೆದುಕೊಂಡಿರುವ ಸಮಾಜ ಬಡವಾಗಿದೆ. ಯಾವುದೇ ರೀತಿಯಲ್ಲಿಯೂ ಗುರೂಜಿಯವರ ಹತ್ಯೆಯು ಅತ್ಯಂತ ಖಂಡನೀಯವಾಗಿದ್ದು ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕಾಗಿದ್ದು ನೊಂದ ಕುಟುಂಬಕ್ಕೆ ನ್ಯಾಯ ಸಿಗಬೇಕಾಗಿದೆ.

ಇನ್ನು ಹೋಟೆಲ್ ನಲ್ಲಿ ಭದ್ರತಾ ವ್ಯವಸ್ಥೆ ವೈಫಲ್ಯವು ಹಂತಕರಿಗೆ ವರದಾನವಾಗಿ ಪರಿಣಮಿಸಿದ್ದು ಹಾಡ ಹಗಲೆ ಹತ್ಯೆ ನಡೆದು ಹೋಗಿದೆ. ಇನ್ನು ನಾಲ್ಕು ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದು ಪೊಲೀಸರ ಕಾರ್ಯ ಶ್ಲಾಘನೀಯವಾಗಿದೆ. ಆರೋಪಿಗಳ ಬಂಧನದ ನಂತರ ಆರೋಪಿಗಳ ಮುಖದಲ್ಲಿ ಪಶ್ಚಾತಾಪದ ಕುರುಹುಗಳು ಕಾಣದೇ ಇರುವುದನ್ನು ನೋಡಿದರೆ, ಗುರೂಜಿಯ ಮೇಲಿನ ಇವರ ದ್ವೇಷ ಅರ್ಥವಾಗುತ್ತದೆ. ಪೊಲೀಸರು ಆದಷ್ಟು ಬೇಗ ಕೊಲೆಯ ಹಿಂದಿನ ಉದ್ದೇಶವನ್ನು ಮತ್ತು ಅದಕ್ಕೆ ಕಾರಣವಾದ ಅಂಶವನ್ನು ಕಂಡುಹಿಡಿದು , ಇವರ ಹಾದಿಯಾಗಿ ಬೇರೆ ಯಾವುದೇ ವ್ಯಕ್ತಿಗಳು ಹತ್ಯೆಯ ಹಿಂದೆ ಇದ್ದರೆ ಅಂತವರನ್ನು ಬಂಧಿಸಿ ತಾರ್ಕಿಕ ಅಂತ್ಯವನ್ನು ಕಾಣಿಸುತ್ತಾರೆಂದು ಆಶಿಸೋಣ.

ಶಿವಕುಮಾರ ಮಠ✍

Leave a Reply

Your email address will not be published. Required fields are marked *