• Tue. Jul 16th, 2024

ರಾಷ್ಟ್ರಪತಿಯಾದ ದ್ರೌಪದಿ

Byadmin

Jul 24, 2022ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ವಿವಿಧ ಜಾತಿ ಜನಾಂಗಗಳು ಆದಿವಾಸಿ ಬುಡಕಟ್ಟುಗಳು ಹಾಗೂ ಧರ್ಮಗಳನ್ನು ಒಳಗೊಂಡ ದೇಶವಾಗಿದ್ದು ಇದನ್ನು ಒಂದು ಉಪಖಂಡ ಎಂದು ಕರೆಯುತ್ತಾರೆ. ಅಂದರೆ ವಿವಿಧ ದೇಶಗಳ ಒಂದು ಭೂಖಂಡವನ್ನು ಖಂಡವೆಂದು ಕರೆದರೆ ಭಾರತವನ್ನು ಉಪಖಂಡವೆಂದು ಕರೆಯಲು ಕಾರಣ ಇಲ್ಲಿ ವಿವಿಧ ಭಾಷೆ ಸಂಸ್ಕೃತಿ, ಭೂ ಪ್ರದೇಶವಿದ್ದು ಒಂದೊಂದು ರಾಜ್ಯಗಳು ಸಹ ಒಂದೊಂದು ದೇಶಕ್ಕೆ ಸಮನಾಗಿವೆ.

ಇಂತಹ ದೇಶದಲ್ಲಿ ಎಲ್ಲ ಜಾತಿ ಜನಾಂಗ ಧರ್ಮದ ಜನರಿಗೆ ಸಮಾನವಾದ ರಾಜಕೀಯ ಸಾಮಾಜಿಕ ಮತ್ತು ಆರ್ಥಿಕ ಅಧಿಕಾರ ಮತ್ತು ಹಕ್ಕುಗಳು ದೊರೆಯುವ ಉದ್ದೇಶದಿಂದ ಮಹಾನ್ ಮಾನವತವಾದಿ ಹಾಗೂ ಮಹಾ ನಾಯಕರಾದ ಡಾಕ್ಟರ್ ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರು ವಿಶ್ವದ ಶ್ರೇಷ್ಠ ಸಂವಿಧಾನಗಳಲ್ಲಿ ಒಂದಾದ ಸಂವಿಧಾನವನ್ನು ಭಾರತಕ್ಕೆ ದಯಪಾಲಿಸಿದರು. ಆದರೂ ಸಹ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸಮಾನ ಅಧಿಕಾರ ಮೂಲಭೂತ ಸೌಕರ್ಯ ಮತ್ತು ರಾಜಕೀಯ ಹಕ್ಕು ಸಿಗುವುದು ವಿಳಂಬವಾಗುತ್ತಲಿದ್ದು, ಇದಕ್ಕೆ ಮುಖ್ಯ ಕಾರಣ ಸಮಾಜದ ಬಲಿಷ್ಠ ವರ್ಗಗಳ ಮುಂದುವರೆದ ಜಾತಿಗಳು ಹಾಗೂ ದಲಿತ ಅಲ್ಪಸಂಖ್ಯಾತರಲ್ಲಿಯೇ ಸರಕಾರಿ ಸೌಲಭ್ಯವನ್ನು ಪಡೆದ ಮುಂದುವರೆದ ಜನರು ಅವರದೇ ಜನಾಂಗದ ಕಟ್ಟಕಡೆಯ ವ್ಯಕ್ತಿಗೆ ಅಧಿಕಾರ ಸಿಗದ ಹಾಗೆ ನೋಡಿಕೊಳ್ಳುತ್ತಿರುವುದು ಕಾರಣವಾಗಿದೆ.

ಭಾರತ ದೇಶದ ಎರಡು ಅತ್ಯುನ್ನತ ಹುದ್ದೆಗಳಾದ ದೇಶದ ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿ ಹುದ್ದೆಗಳಿಗೆ ಅಲ್ಪಸಂಖ್ಯಾತರು ದಲಿತರು ಆಸೀನರಾಗುವುದು ವಿರಳ ಸಂಗತಿಯಾಗಿದೆ ಅದರಲ್ಲಿಯೂ ರಾಷ್ಟ್ರಪತಿ ಹುದ್ದೆಗೆ ದಲಿತ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಅವಕಾಶ ಸಿಕ್ಕರೆ,,, ಪ್ರಧಾನ ಮಂತ್ರಿ ಹುದ್ದೆಗೆ ಇಲ್ಲಿಯವರೆಗೆ ಕೇವಲ ಒಬ್ಬ ಅಲ್ಪಸಂಖ್ಯಾತ ವ್ಯಕ್ತಿಯಾದ ಮನಮೋಹನ್ ಸಿಂಗ್ ಅವರಿಗೆ ಅಧಿಕಾರ ಸಿಕ್ಕಿದ್ದು ಬಿಟ್ಟರೆ ದಲಿತ ಹಿಂದುಳಿದ ಹಾಗೂ ಆದಿವಾಸಿ ಜನರಿಗೆ ಆ ಹುದ್ದೆಯು ಇನ್ನೂ ಕನಸಿನ ಮಾತಾಗಿದೆ. ಪ್ರಸ್ತುತ ಭಾರತದ ರಾಷ್ಟ್ರಪತಿಯಾದ ರಾಮನಾಥ್ ಕೋವಿಂದ್ ಅವರ ಅವಧಿಯು ಇದೆ ಜುಲೈ 24ರಂದು ಮುಕ್ತಾಯವಾಗಲಿದ್ದು ಅವರ ಉತ್ತರಾಧಿಕಾರಿಗಾಗಿ ನಡೆದ ಚುನಾವಣೆಯಲ್ಲಿ ದೇಶದ ಪ್ರಥಮ ಆದಿವಾಸಿ ಬುಡಕಟ್ಟು ಮಹಿಳೆಯಾದ”ದ್ರೌಪದಿ ಮುರ್ಮು” ಆಯ್ಕೆಯಾಗಿದ್ದು, ದೇಶದ ಪ್ರಥಮ ಆದಿವಾಸಿ ರಾಷ್ಟ್ರಪತಿಯಾಗಿದ್ದು ಪ್ರತಿಭಾ ಪಾಟೀಲರ ನಂತರ ಈ ಹುದ್ದೆಗೆ ಏರಿದ ಎರಡನೇ ಮಹಿಳೆಯಾಗಿದ್ದಾರೆ. ಇನ್ನು ಇವರು ಗಳಿಸಿದ ಮತಗಳ ಕುರಿತು ಮಾತನಾಡುವುದಾದರೆ ದ್ರೌಪದಿ ಮುರ್ಮ ಅವರಿಗೆ ಶೇಕಡ 64% ರಷ್ಟು ಮೌಲ್ಯದ ಮತಗಳು ಲಭ್ಯವಾಗಿದ್ದು ವಿರೋಧ ಪಕ್ಷದ ಅಭ್ಯರ್ಥಿಯಾದ ಯಶವಂತ ಸಿನ್ಹಾ ಅವರಿಗೆ ಶೇಕಡ 36 ಮೌಲ್ಯದ ಮತಗಳು ಲಭಿಸಿವೆ. ಸಹಜವಾಗಿಯೇ ದ್ರೌಪದಿ ಮುರ್ಮುವರನ್ನು ಪಕ್ಷಾತೀತವಾಗಿ ಶಾಸಕರು ಹಾಗೂ ಸಂಸದರು ಬೆಂಬಲಿಸಿದ್ದು ನಿರೀಕ್ಷೆಗಿಂತ ಹೆಚ್ಚು ಮತಗಳನ್ನು ಪಡೆದಿದ್ದಾರೆ. ಈ ಹುದ್ದೆಗೇರಿದ ಇವರು ಪ್ರಥಮ ಆದಿವಾಸಿಯಾಗಿದ್ದು ಜೊತೆಗೆ ಸ್ವಾತಂತ್ರ್ಯ ನಂತರ ಹುಟ್ಟಿದ ಪ್ರಥಮ ರಾಷ್ಟ್ರಪತಿಯಾಗಿದ್ದು ಮತ್ತು ಅತಿ ಕಿರಿಯ ವಯಸ್ಸಿನ ರಾಷ್ಟ್ರಪತಿಗಳಾಗಿದ್ದಾರೆ.ಇವರು ರಾಷ್ಟ್ರಪತಿಗಳಾಗಿ ಇದೇ ಜುಲೈ 25ರಂದು ಪ್ರಮಾಣ ವಚನ ಸ್ವೀಕರಿಸಲಿದ್ದು ಹುಟ್ಟೂರಿನಲ್ಲಿ ಹಾಗೂ ಅವರ ತವರು ರಾಜ್ಯವಾದ ಓಡಿಸಾದಲ್ಲಿ ಸಂಭ್ರಮಣೆ ಮಾಡಿದೆ. ಮುರ್ಮೋ ಅವರ ತವರಿನ ಊರಾದ ಓಡಿಸ್ಸಾದ ಮಯೂರ್ ಭಂಜ ಜಿಲ್ಲೆಯ ರಾಯರಂಗಪುರದಲ್ಲಿರುವ ನಿವಾಸದಲ್ಲಿ ಸ್ಥಳೀಯ ಜನರು ನೃತ್ಯದ ಮೂಲಕ ಹಾಗೂ ಲಡ್ಡು ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದರು. ಇನ್ನು ದ್ರೌಪದಿ ಮುಮು೯ 1958ರ ಜೂನ್ 20ರಂದು ಒಡಿಸ್ಸಾ ಜಾರ್ಖಂಡ್ ಛತ್ತೀಸ್ಗಡದಲ್ಲಿ ಕಂಡುಬರುವ ಸಂತಾಲಿ ಬುಡಕಟ್ಟು ಜನಾಂಗದಲ್ಲಿ ಜನಿಸಿದ್ದು ಅವರ ತಂದೆ ಹಾಗೂ ತಾತ ರಾಜಕೀಯದಲ್ಲಿದ್ದು ಗ್ರಾಮ ಪಂಚಾಯಿತಿಯ ಮುಖ್ಯಸ್ಥರಾಗಿದ್ದು ದ್ರೌಪದಿ ಮುರ್ಮು ಅವರಿಗೆ ಕುಟುಂಬ ರಾಜಕೀಯದ ಇತಿಹಾಸವಿದೆ.

ಇನ್ನು ಇವರ ಶಿಕ್ಷಣದ ಕುರಿತು ಹೇಳುವುದಾದರೆ ಕಲಾ ವಿಷಯದಲ್ಲಿ ಪದವೀಧರಾದ ಇವರು ಕೆಲ ಕಾಲ ಪ್ರಾಧ್ಯಾಪಕ ವೃತ್ತಿಯನ್ನು ಕೈಗೊಂಡು 1997 ರಲ್ಲಿ ರಂಗಪುರ ಪಂಚಾಯಿತಿಗೆ ಆಯ್ಕೆ ಆಗುವ ಮೂಲಕ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದರು. ಇಲ್ಲಿಂದ ರಾಜಕೀಯದಲ್ಲಿ ತಿರುಗಿ ನೋಡದ ಅವರು ಮುಂದೆ ಎರಡು ಬಾರಿ ಒಡಿಸ್ಸಾ ವಿಧಾನಸಭೆಗೆ ಆಯ್ಕೆ ಆಗುವ ಮೂಲಕ ಭಾರತೀಯ ಜನತಾ ಪಾರ್ಟಿ ಮತ್ತು ಬೀಜು ಜನತಾದಳದ ಸಮ್ಮಿಶ್ರ ಸರ್ಕಾರದಲ್ಲಿ ಸಚಿವೆಯಾಗಿ ಕಾರ್ಯನಿರ್ವಹಿಸಿದ ಅನುಭವವನ್ನು ಹೊಂದಿದ್ದಾರೆ. ಅಲ್ಲದೆ 2015 ರಿಂದ 2021 ರವರೆಗೆ ಜಾರ್ಖಂಡ್ ರಾಜ್ಯದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ.

ಇನ್ನು ವಯಕ್ತಿಕ ಬದುಕಿನ ಕುರಿತು ಹೇಳುವುದಾದರೆ ಇವರ ಇಬ್ಬರು ಪುತ್ರರು ಅಕಾಲಿಕ ಮರಣ ಹೊಂದಿದ್ದು ಇವರ ಪತಿ ಶಾಮ ಶರಣ್ ಮರ್ಮವರು ಹೃದಯಾಘಾತದಿಂದ ಅಸುನೀಗಿದ್ದಾರೆ. ಈಗ ಏಕ ಮಾತ್ರ ಪುತ್ರಿ ಇದ್ದು ಆಕೆ ಭುವನೇಶ್ವರದಲ್ಲಿ ನೆಲೆಸಿದ್ದಾರೆ. ಒಂದು ಕಾಲದಲ್ಲಿ ಕೇವಲ ಪಟ್ಟಣ ಜನರ ಮತ್ತು ಮುಂದುವರೆದ ಜಾತಿಗಳ ಪಕ್ಷವಾಗಿದ್ದ ಬಿಜೆಪಿ ರಾಜಕೀಯ ಅನಿವಾರ್ಯತೆಯಿಂದಲೂ ಅಥವಾ ಮುಂದುವರೆದ ಜಾತಿಗಳ ಪಕ್ಷವೆಂಬ ಹಣೆಪಟ್ಟಿಯನ್ನು ಕಳಚಿಕೊಳ್ಳುವ ಉದ್ದೇಶದಿಂದಲೋ ಒಟ್ಟಿನಲ್ಲಿ ದಲಿತ ಹಿಂದುಳಿದ ಆದಿವಾಸಿ ಕಾರ್ಯಕರ್ತರಿಗೆ ಮಣೆ ಹಾಕುತ್ತಿರುವುದು ಒಂದು ಒಳ್ಳೆಯ ಬೆಳವಣಿಗೆ.

ಎನ್‌ಡಿಎ ಅಭ್ಯರ್ಥಿಯಾಗಿ ದ್ರೌಪತಿ ಮುಮು೯ ಅವರನ್ನು ಘೋಷಣೆ ಮಾಡಿದಾಗ ಸಹಜವಾಗಿಯೇ ವಿಪಕ್ಷದ ಕೆಲವು ನಾಯಕರುಗಳು ಇವರು ಕೇವಲ ರಬ್ಬರ್ ಸ್ಟ್ಯಾಂಪ್ ರಾಷ್ಟ್ರಪತಿಗಳಾಗಿ ಕಾರ್ಯನಿರ್ವಹಿಸುವುದು ಖಚಿತವಾಗಿದ್ದು ಯಾವುದೇ ರೀತಿಯ ಸ್ವತಂತ್ರ ನಿಲುವುಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಟೀಕಿಸಿದರು .ಇನ್ನು ಭಾರತದಲ್ಲಿ ರಾಷ್ಟ್ರಪತಿಯಾದವರು ಪಕ್ಷಾತೀತರಾಗಿದ್ದು ಯಾವುದೇ ಪಕ್ಷಕ್ಕೆ ನಿಷ್ಠರಾಗಿರುವುದಿಲ್ಲದೆ ಕೆಲವು ಸಂದರ್ಭದಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರ್ಕಾರವನ್ನು ಸಮರ್ಥನೆ ಮಾಡುವ ಪ್ರಸಂಗ ಎದುರಾಗುತ್ತದೆ, ಹಾಗೂ ಸಂವಿಧಾನ ಕಲ್ಪಿಸಿರುವ ಇತಿಮಿತಿಗಳಲ್ಲಿ ಕಾರ್ಯನಿರ್ವಹಿಸಬೇಕಾಗಿದ್ದು ಸಹಜವಾಗಿಯೇ ಇದು ವಿರೋಧ ಪಕ್ಷಗಳಿಗೆ ರಬ್ಬರ್ ಸ್ಟ್ಯಾಂಪ್ ಅಧಿಕಾರದಂತೆ ಕಂಡರೂ ಅಚ್ಚರಿ ಇಲ್ಲ. ಇಂತಹ ಎಲ್ಲಾ ಸಂದರ್ಭಗಳಲ್ಲಿ ಅಧಿಕಾರಕ್ಕೆ ಬಂದ ರಾಷ್ಟ್ರಪತಿಗಳು ಇದೇ ರೀತಿ ಕಾರ್ಯನಿರ್ವಹಿಸಿದ್ದು ವಿವಿಧ ಸಮಯದಲ್ಲಿ ಅಧಿಕಾರದಲ್ಲಿದ್ದ ಸರ್ಕಾರಗಳನ್ನು ಬೆಂಬಲಿಸಿದ್ದ ನಿದರ್ಶನಗಳು ಉಂಟು. ಹಾಗಾಗಿ ಅವರನ್ನು ರಬ್ಬರ್ ಸ್ಟ್ಯಾಂಪ್ ರಾಷ್ಟ್ರಪತಿಗಳೆಂದು ಕರೆಯುವುದು ಅಸಂವಿಧಾನಕವಾಗಿದ್ದು ಅಸಮರ್ಥನೆಯವಾಗಿದೆ.

ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸುವ ಸದಸ್ಯರು ಮತ್ತು ಸಂಸದರಿಗೆ ಯಾವುದೇ ರೀತಿಯಾದಂತಹ ವಿಪ್ ಜಾರಿ ಮಾಡಲಾಗುವುದಿಲ್ಲ ಹಾಗಾಗಿ ಅಡ್ಡ ಮತದಾನಗಳಾದರೂ ಸಹ ಪಕ್ಷಗಳು ತಮ್ಮ ಸದಸ್ಯರ ಮೇಲೆ ಯಾವುದೇ ರೀತಿಯ ಶಿಸ್ತಿನ ಕ್ರಮವನ್ನು ಕೈಗೊಳ್ಳಲು ಭಾದ್ಯರಾಗುವುದಿಲ್ಲ. ಮತ ಚಲಾಯಿಸುವ ಎಲ್ಲ ಸದಸ್ಯರು ಆತ್ಮ ಸಾಕ್ಷಿಗೆ ಅನುಗುಣವಾಗಿ ಮತವನ್ನು ಚಲಾಯಿಸುತ್ತಲಿದ್ದು ರಾಷ್ಟ್ರಪತಿಗಳು ರಬ್ಬರ್ ಸ್ಟ್ಯಾಂಪ್ ಅನ್ನುವ ವಿಚಾರ ಹಾಸ್ಯಾಸ್ಪದನೆಯವಾಗಿದೆ. ಅದೇನೇ ಇದ್ದರೂ ದೇಶದ ಅತ್ಯುನ್ನತ ಹುದ್ದೆಗಳು ಸಾಮಾನ್ಯ ವ್ಯಕ್ತಿಗಳಿಗೆ ಸಮಾಜದಲ್ಲಿ ತುಳಿತಕ್ಕೆ ಒಳಗಾದ ಜನರಿಗೆ ಅಲ್ಪಸಂಖ್ಯಾತರಿಗೆ ಹಾಗೂ ಆದಿವಾಸಿ ಬುಡಕಟ್ಟು ಜನರಿಗೆ ದೊರೆತು ಸಂವಿಧಾನದ ಮೂಲ ಆಶಯಗಳು ಸಾಕಾರವಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ಯುವ ಪ್ರಕ್ರಿಯೆ ಚುರುಕಾಗಿ ದೇಶದ ಅಭಿವೃದ್ಧಿಯಲ್ಲಿ ಕಟ್ಟ ಕಡೆಯ ವ್ಯಕ್ತಿಯು ಪಾಲುದಾರನಾಗುತ್ತಾನೆಂದು ನಂಬಿಕೆಯಿಂದ ದೇಶದ 15ನೇ ರಾಷ್ಟ್ರಪತಿಯಾಗಿ ಚುನಾಯಿತರಾದ ಶ್ರೀಮತಿ ದ್ರೌಪದಿ ಮರ್ಮು ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ ಅವರು ಸಂವಿಧಾನದತ್ತವಾದ ಅಧಿಕಾರವನ್ನು ಸಮರ್ಥವಾಗಿ ಚಲಾಯಿಸುತ್ತಾರೆ ಎಂದು ಆಶಿಸೋಣ.

• •ಶಿವಕುಮಾರ ಮಠ ✍️

Leave a Reply

Your email address will not be published. Required fields are marked *