• Tue. Jul 23rd, 2024

ಮತ್ತೆ ಹರಿದ ನೆತ್ತರು

Byadmin

Jul 31, 2022


ಕರ್ನಾಟಕದ ಕರಾವಳಿಯ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ಮತ್ತೆ ದ್ವೇಷದ ಕೊಲೆಗಳು ಸದ್ದು ಮಾಡುತ್ತಲಿದ್ದು ಕಳೆದ ಬುಧವಾರ ಭಾರತೀಯ ಜನತಾ ಪಕ್ಷದ ಯುವ ಮೋರ್ಚ ಪ್ರಧಾನ ಕಾರ್ಯದರ್ಶಿ, ಪ್ರವೀಣ್ ನೆಟ್ಟಾರ ಅವರನ್ನು ಕೊಲೆ ಮಾಡಲಾಗಿದ್ದು ಕೋಮು ಸೂಕ್ಷ್ಮವಾದ ಸೂರತ್ಕಲ್ ನಲ್ಲಿ ಉದ್ವಿಗ್ನ
ಪರಿಸ್ಥಿತಿ ನಿರ್ಮಾಣವಾಗಿ ಜನರು ರಸ್ತೆಗಿಳಿದು ಸರ್ಕಾರ ಮತ್ತು ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಸಂಘ ಪರಿವಾರದಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದು ಸದ್ಯ ಬಿಜೆಪಿಯ ಯುವ ಮೋರ್ಚಾದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಪ್ರವೀಣ್ ಅವರು ರಾಜಕೀಯವಾಗಿ ಮುಂಚೂಣಿಗೆ ಬರುವ ನಾಯಕರಾಗಿದ್ದರು.

ಸಂಘ ಪರಿವಾರದ ಕಾರ್ಯಕರ್ತರು ಇವರ ಹತ್ಯೆಯನ್ನು ಪ್ರತಿಭಟಿಸಿ, ಮೃತ ದೇಹದ ಅಂತಿಮ ದರ್ಶನ ಪಡೆಯಲು ಬಂದ ಬಿಜೆಪಿ ಹಾಗೂ ಸಂಘ ಪರಿಹಾರದ ಕೆಲವು ನಾಯಕರನ್ನು ಮುತ್ತಿಗೆ ಹಾಕಿ ಬಿಸಿ ಮುಟ್ಟಿಸಿದರು. ರಾಜ್ಯದಲ್ಲಿ ತಮ್ಮದೇ ಪಕ್ಷದ ಸರ್ಕಾರವಿದ್ದು ಕೇಂದ್ರದಲ್ಲಿಯೂ ಸಹ ತಮ್ಮದೇ ಪಕ್ಷ ಆಡಳಿತ ನಡೆಸುತ್ತಿದ್ದರೂ ಸಹ, ಸಂಘದ ಹಾಗೂ ಪಕ್ಷದ ಕಾರ್ಯಕರ್ತರ ಕೊಲೆಗಳು ನಿರಂತರವಾಗಿ ನಡೆಯುತ್ತಲಿದ್ದು ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಂಡು ಭಯದ ವಾತಾವರಣವನ್ನು ಹೋಗಲಾಡಿಸಲು ಸರಕಾರಗಳು ವಿಫಲವಾಗಿವೆ ಎಂದು ಆರೋಪಿಸಿ ತಮ್ಮ ಸ್ಥಾನಗಳಿಗೆ ಯುವ ಮೋರ್ಚಾ ಪದಾಧಿಕಾರಿಗಳು ಹಾಗೂ
ಮುಖಂಡರುಗಳು ಸಾಮೂಹಿಕ ರಾಜೀನಾಮೆ ನೀಡಲು ಪ್ರಾರಂಭಿಸಿದರು.


ಇನ್ನು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಹಾಗೂ ಜನರು ಆಪಾದಿಸುವಂತೆ ಈ ಹತ್ಯೆಗೆ ಮುಸ್ಲಿಂ ಮೂಲಭೂತವಾದಿ ಶಕ್ತಿಗಳು ಹಾಗೂ ಸ್ಥಳೀಯ ರಾಜಕೀಯ ಪಕ್ಷವಾದ ಎಸ್ ಡಿ ಪಿ ಐ ಹಾಗೂ ಪಿ ಎಫ್ ಐ ನೇರವಾಗಿ ಕಾರಣವಾಗಿವೆ . ಮೇಲ್ನೋಟಕ್ಕೆ ಇವರ ಆಪಾದನೆ ನಿಜವೆಂದು ಕಂಡುಬಂದರೂ ಹತ್ಯೆಯ
ಹಿಂದಿನ ಉದ್ದೇಶ ಮತ್ತು ಪ್ರೇರಣೆಯನ್ನು ಬಯಲಿಗೆಳೆಯದಿದ್ದರೆ ಇಂತಹ ಹತ್ಯೆಗಳು ನಿರಂತರವಾಗಿ ಸಂಭವಿಸಬಹುದಾದ ಸಾಧ್ಯತೆ ಇದ್ದು ಈಗಾಗಲೇ ಸರ್ಕಾರ ಈ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಕಾ ಸಂಸ್ಥೆಯಾದ ಎನ್ಐಎ ಗೆ ವರ್ಗಾಯಿಸಿದ್ದು ಸರ್ಕಾರ ಈ ಕುರಿತು ಗಂಭೀರವಾಗಿದ್ದನ್ನು ತೋರಿಸುತ್ತದೆ.

ಹೀಗಾಗಲೆ ಹಂತಕರಿಗೆ ಪರೋಕ್ಷವಾಗಿ ಸಹಾಯ ಮಾಡಿದ ಇಬ್ಬರು ಯುವಕರನ್ನು ಬಂಧಿಸಲಾಗಿದ್ದು, ಇವರಿಬ್ಬರೂ ಸಹ ಪ್ರವೀಣನಿಗೆ ಪರಿಚಿತ ವ್ಯಕ್ತಿಗಳಾಗಿದ್ದಾರೆ. ಹಂತಕರು ನೆರೆಯ ಕೇರಳದಿಂದ ಬಂದಿದ್ದು ಮರಳಿ ಕೇರಳ ಪ್ರದೇಶಕ್ಕೆ ಹೋಗಿರುವ ಸಾಧ್ಯತೆಯಿದ್ದು ಪೊಲೀಸ್ ತಂಡಗಳು ಕೇರಳಕ್ಕೆ ಧಾವಿಸಿದ್ದು ಹಂತಕರಿಗಾಗಿ ಶೋಧ ನಡೆಸಿದ್ದಾರೆ. ಇನ್ನು ನೆರೆಯ ರಾಜ್ಯವಾದ ಕೇರಳದಲ್ಲಿ ರಾಜಕೀಯ ಹಾಗೂ ಕೋಮು ದ್ವೇಷದ ಹತ್ಯೆಗಳು ಸಾಮಾನ್ಯವಾಗಿದ್ದು ಈ ಸಂಸ್ಕೃತಿ ಕರ್ನಾಟಕದ ಗಡಿ ಜಿಲ್ಲೆಗಳಿಗೆ ಪಸರಿಸಿದ್ದು ಆತಂಕವನ್ನು ತಂದು ಒಡ್ಡಿದೆ.

ಒಂದೊಮ್ಮೆ ಕರ್ನಾಟಕದ ಕರಾವಳಿ ಜಿಲ್ಲೆಗಳನ್ನು ಸಂಘ ಪರಿವಾರದ ಪ್ರಯೋಗಾಲಯಗಳೆಂದು ಟೀಕಿಸುತ್ತಿದ್ದ ವಿರೋಧ ಪಕ್ಷಗಳು ಈಗ ಅದೇ ಪ್ರದೇಶ ಜಿಹಾದಿಗಳ ಪ್ರಯೋಗಾಲಯವಾಗಿ ಮಾರ್ಪಟ್ಟಿದ್ದರೂ ಸಹ ಗಂಭೀರವಾಗಿ ಪ್ರತಿಭಟಿಸುವ ಅಥವಾ ಅಲ್ಪಸಂಖ್ಯಾತ ಮುಖಂಡರುಗಳಿಗೆ ತಿಳಿ ಹೇಳುವ ಕಾರ್ಯವನ್ನು ಕೈ ಬಿಟ್ಟು ತೆಪ್ಪಗೆ ಕುಳಿತುಕೊಂಡಿರುವುದನ್ನು ನೋಡಿದರೆ ಆ ಪಕ್ಷಗಳಿಗೆ ಕೋಮು ದ್ವೇಷದ ಚಿಂತೆಗಿಂತ ತಮ್ಮ ವೋಟ್ ಬ್ಯಾಂಕಿನ ಚಿಂತೆ ಕಾಡುತ್ತಿದೆ ಎಂದೆನಿಸುತ್ತದೆ.

ಈಗಾಗಲೇ ನೆರೆಯ ರಾಜ್ಯವಾದ ಕೇರಳದ ಅಲ್ಪಸಂಖ್ಯಾತ ಯುವಕರು ಮೂಲಭೂತವಾದದ ಕಡೆ ಆಕರ್ಷಿತರಾಗಿದ್ದು ಎಷ್ಟೋ ಯುವಕರು ಕೇರಳದಿಂದ ಪಲಾಯನ ಮಾಡಿ ಅಫಘಾನಿಸ್ತಾನ ಸಿರಿಯಾದಂತಹ ಪ್ರದೇಶಗಳಲ್ಲಿ ಜಿಹಾದಿಗಳಾಗಿ ಮಾರ್ಪಟ್ಟಿದ್ದು ಗುಟ್ಟಾಗಿ ಉಳಿದಿಲ್ಲ. ಕೇರಳ ಒಂದರಿಂದಲೇ ಅತಿ ಹೆಚ್ಚು ಯುವಕರು ಐಎಸ್ಐಎಸ್ ಪರ ಹೋರಾಟ ಮಾಡುತ್ತಿದ್ದು, ಕೇರಳದಲ್ಲಿ ಇಸ್ಲಾಂ ಮೂಲಭೂತವಾದ ಪೆಡಂಭೂತವಾಗಿ ಬೆಳೆದಿದ್ದು ಅಲ್ಲಿನ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸದೆ ಹೋಗಿದ್ದು ದುರಂತ.

ಇನ್ನು ಇದು ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ತನ್ನ ಕದಂಬಬಾಹುವನ್ನು ಪಸರಿಸುತ್ತಲಿದ್ದು ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಳ್ಳದೆ ಹೋದರೆ ನಿರಂತರವಾಗಿ ಅಮಾಯಕರ ಹೆಣಗಳು ಉರುಳುತ್ತಾ ಹೋಗುತ್ತವೆ. ವಿವಿಧ ಪಕ್ಷಗಳು ಈ ಹತ್ಯೆ ಕುರಿತು ರಾಜಕೀಯ ಮಾಡುತ್ತಿದ್ದು ಬಿಜೆಪಿ ತನ್ನ ಕಾರ್ಯಕರ್ತರಿಗೆ ಸುರಕ್ಷತೆಯನ್ನು ಕಲ್ಪಿಸಲು ವಿಫಲವಾಗಿದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿವೆ. ಆದರೆ ಸತ್ಯವೇನೆಂದರೆ ಧಾರ್ಮಿಕ ಪ್ರಚೋದನೆಗೆ ಒಳಗಾದ ಯುವಕರು ಇಂತಹ ಹತ್ಯೆಗಳಲ್ಲಿ ಭಾಗಿಯಾಗತೊಡಗಿದರೆ ನಿಯಂತ್ರಿಸುವುದು ಯಾವುದೇ ಸರ್ಕಾರಕ್ಕೆ ಒಂದು ಸವಾಲಾಗಿ ಪರಿಣಮಿಸುತ್ತದೆ.

ಇಲ್ಲಿ ಹೇಳುವ ತಾತ್ಪರ್ಯವೇನೆಂದರೆ ಯಾವುದೋ ಒಂದು ತಂಡ ಇಲ್ಲವೇ ಯಾವುದೋ ಒಂದು ವ್ಯಕ್ತಿ ವೈಯಕ್ತಿಕ ದ್ವೇಷಕ್ಕೂ ಅಥವಾ ಹಣದಾಸೆಗೆ ಕೊಲೆ ದರೋಡೆ ಮಾಡುತ್ತಿದ್ದರೆ ಅಂತಹ ತಂಡವನ್ನು ಮತ್ತು ಅಂತಹ ವ್ಯಕ್ತಿಯನ್ನು ಮಟ್ಟ ಹಾಕಿ ಆಗಬಹುದಾದ ಕೊಲೆಗಳನ್ನು ಅಥವಾ ಇನ್ಯಾವುದೇ ಘಟನೆಗಳನ್ನು ತಡೆಯಬಹುದಾಗಿದೆ. ಆದರೆ ಸಾವಿರಾರು ಸಂಖ್ಯೆಯಲ್ಲಿರುವ ಯುವಕರು ಧಾರ್ಮಿಕ ಮೂಲಭೂತವಾದದಿಂದ ಪ್ರೇರಪಣೆಗೊಂಡು ಇಂತಹ ಕೃತ್ಯಗಳನ್ನು ಮಾಡಲು ಪ್ರಾರಂಭಿಸಿದರೆ ಸರ್ಕಾರದಿಂದ ಅಷ್ಟೇ ಅಲ್ಲ ಯಾವುದೇ ವ್ಯವಸ್ಥೆಯಿಂದ ಅಂತವರನ್ನು ನಿಯಂತ್ರಣ ಮಾಡಲು ಸಾಧ್ಯವಿಲ್ಲ.

ಇನ್ನು ಇಂತಹ ವಿಚಿತ್ರಕಾರಿ ಶಕ್ತಿಗಳು ಹೊಸದೊಂದು ರೀತಿಯ ಕಾರ್ಯ ಶೈಲಿಯನ್ನು ಅಳವಡಿಸಿಕೊಂಡಿದ್ದು ಗುಂಪು ಗುಂಪಾಗಿ ಜನರನ್ನು ಕಟ್ಟಿಕೊಂಡು ಪೊಲೀಸ್ ಠಾಣೆಗಳು ಹಾಗೂ ಇತರ ಸರಕಾರಿ ಆಸ್ತಿಗಳ ಮೇಲೆ ದಾಳಿ ಮಾಡುತ್ತಲಿದ್ದು ಇಂತಹ ಘಟನೆಗಳನ್ನು ನಾವು ಬೆಂಗಳೂರಿನ ಕೆಜಿ ಹಳ್ಳಿ ಹಾಗೂ ಮಂಗಳೂರಿನ ಪ್ರದೇಶಗಳಲ್ಲಿ ಇತ್ತೀಚಿಗೆ ರಾಜಾಸ್ಥಾನದಲ್ಲಿ ನೋಡಿದ್ದು, ಅಲ್ಪಸಂಖ್ಯಾತರು ವಾಸಿಸುವ ಪ್ರದೇಶಗಳಿಗೆ ಪೊಲೀಸರು ಸಹ ಪ್ರವೇಶಿಸಲು ಹೆದರುತ್ತಿರುವ
ಪರಿಸ್ಥಿತಿ ನಿರ್ಮಾಣವಾಗಿದ್ದು ಪೊಲೀಸ್ ವ್ಯವಸ್ಥೆಗೆ ಮತ್ತು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸುತ್ತಿದೆ.

ಇನ್ನು ಕೆಲವು ವಿದೇಶಿ ಶಕ್ತಿಗಳು ಮುಂಚೆ ತಮ್ಮ ದೇಶದಿಂದ ಯುವಕರನ್ನು ತರಬೇತಿ ಕೊಟ್ಟು ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಬಳಸುತ್ತಿದ್ದರೆ, ಇತ್ತೀಚೆಗೆ ಭಾರತದಲ್ಲಿಯ ಅಲ್ಪಸಂಖ್ಯಾತ ಯುವಕರನ್ನು ಬಳಸಿಕೊಂಡು ಧಾರ್ಮಿಕ ಮೂಲಭೂತವಾದದಿಂದ ಅವರನ್ನು ಪ್ರೇರೇಪಿಸಿ ಭಯೋತ್ಪಾದಕ ಘಟನೆಗಳು ಹಾಗೂ ಇನ್ನಿತರ ಸಮಾಜದ್ರೋಹಿ ಚಟುವಟಿಕೆಗಳಲ್ಲಿ ಸಕ್ರಿಯಗೊಳಿಸುತ್ತಿರುವುದನ್ನು ನೋಡಿದರೆ ಒಂದು ನಿರ್ದಿಷ್ಟವಾದ ಹಾಗೂ ದೂರದೃಷ್ಟಿಯ ಯೋಜನೆಯನ್ನು ಕೈಗೊಳ್ಳುತ್ತಿರುವುದು ಸ್ಪಷ್ಟವಾಗಿದೆ.

ಆದ್ದರಿಂದ ಆಡಳಿತ ಪಕ್ಷ ಮತ್ತು ವಿಪಕ್ಷಗಳು ಓಲೈಕೆ ರಾಜಕಾರಣದಲ್ಲಿ ಕಾಲಹರಣ ಮಾಡುವ ಬದಲು ಇಂತಹ ವಿಚಿತ್ರಕಾರಿ ಶಕ್ತಿಗಳ ವಿರುದ್ಧ ಒಂದಾಗಿ ನಿಲ್ಲದೆ ಹೋದರೆ ಮುಂದೊಂದು ದಿನ ಈ ರಾಜ್ಯ ಮತ್ತು ದೇಶಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಈ ದೇಶದ ಜನಸಂಖ್ಯೆಯ ಶೇಕಡ 20ರಷ್ಟು ಇರುವ ಅಲ್ಪಸಂಖ್ಯಾತರಲ್ಲಿ ಕೇವಲ ಶೇಕಡ ಒಂದರಷ್ಟು ಜನ ಧಾರ್ಮಿಕ ಮೂಲಭೂತವಾದದ ಕಡೆ ಆಕರ್ಷಿತರಾಗಿ ದಂಗೆ ಎದ್ದರೆ ದೇಶದಲ್ಲಿ ನರಕದಂತ ಪರಿಸ್ಥಿತಿ ನಿರ್ಮಾಣವಾಗಬಹುದು, ಈಗಾಗುವುದಕ್ಕೆ ಮುಂಚೆ ಎಲ್ಲ ರಾಜಕೀಯ ಪಕ್ಷಗಳು ಹಾಗೂ ಜವಾಬ್ದಾರಿಯುತ ನಾಗರಿಕರು ಧಾರ್ಮಿಕ ಮುಖಂಡರುಗಳು ಒಟ್ಟಾಗಿ ಕ್ರಮ ಕೈಗೊಂಡು ಆ ಪರಿಸ್ಥಿತಿ ಬಾರದೆ ಇರುವಂತೆ ನೋಡಿಕೊಳ್ಳುತ್ತಾರೆ ಎಂದು ಆಶಿಸೋಣ.

ಶಿವಕುಮಾರ್ ಮಠ ✍️

Leave a Reply

Your email address will not be published. Required fields are marked *