• Tue. Jul 16th, 2024

ತೃತೀಯ ಲಿಂಗಿಗಳಿಗೆ ‌ಬೇಕು ‌ಸಮಾಜದ ಆಲಿಂಗನ

Byadmin

Aug 7, 2022
ಸೃಷ್ಟಿಕರ್ತ ಸೃಷ್ಟಿಸಿರುವ ಈ ಜಗತ್ತಿನಲ್ಲಿ ಭೌತಿಕ ಸಮತೋಲನ ಕಾಯ್ದುಕೊಳ್ಳಲು ಪ್ರಾಣಿ ಸಸ್ಯಗಳಲ್ಲಿ ಸಜಾತಿ ಹಾಗೂ ವಿಜಾತಿಯ ಪ್ರಾಣಿಗಳಾದ ಗಂಡು ಹೆಣ್ಣು ಅಷ್ಟೇ ಏಕೆ ಇತ್ತ ಗಂಡು ಅಲ್ಲದ ಅರ್ಧ ಹೆಣ್ಣು ಅಲ್ಲದ ಅಲಿಪ್ತ ಪ್ರಾಣಿ ಹಾಗೂ ಸಸ್ಯಗಳನ್ನು ಸೃಷ್ಟಿಸಿದ್ದಿದೆ. ಅಲ್ಲದೆ ವಸ್ತುಗಳ ಅಣುಗಳಲ್ಲಿಯೂ ಸಹ ಧನಾತ್ಮಕ ಮತ್ತು ಋಣಾತ್ಮಕ ಆಯಾನ್ ಗಳನ್ನು ಅಲ್ಲದೆ ಅಲಿಪ್ತ ಅಯಾನು, ಅಂದರೆ ಪ್ರೋಟಾನ್ ನ್ಯೂಟ್ರಾನ್ ಮತ್ತು ಎಲೆಕ್ಟ್ರಾನ್ ಸಹ ಸೃಷ್ಟಿಸಿದ್ದು ಇದು ವಸ್ತುಗಳಲ್ಲಿ ಹಾಗೂ ಜೀವರಾಶಿಗಳಲ್ಲಿ ಒಂದು ರೀತಿಯ ಸಮತೋಲನಕ್ಕೆ ಕಾರಣವಾಗಿದೆ.

ತೃತೀಯ ಲಿಂಗ ಅನ್ನುವುದು ಪ್ರಾಕೃತಿಕವಾಗಿ ಒಂದು ನೈಸರ್ಗಿಕ ಜೀವವಾಗಿದ್ದು ಗಂಡು ಮತ್ತು ಹೆಣ್ಣು ಎಷ್ಟು ಸತ್ಯ ಅಷ್ಟೇ ತೃತೀಯ ಲಿಂಗವು ಸತ್ಯವಾಗಿದೆ. ಎಲ್ಲ ಪ್ರಾಣಿ ಮತ್ತು ಪಕ್ಷಿಗಳು ಹಾಗೂ ಸಸ್ಯಗಳಲ್ಲಿ ಕಂಡುಬರುವ ಇದು ಹೆಚ್ಚಾಗಿ ನಮಗೆ ಗೋಚರವಾಗುವುದು ಮನುಷ್ಯ ಜಾತಿಯಲ್ಲಿ .ಇದಕ್ಕೆ ಕಾರಣವೇನೆಂದರೆ ಭೂಮಿಯ ಮೇಲಿನ ಸಕಲ ಜೀವರಾಶಿಗಳಲ್ಲಿ ಮನುಷ್ಯ ಪ್ರಾಣಿಯು ಬೌಧಿಕವಾಗಿ ಸಾಮಾಜಿಕವಾಗಿ ಮತ್ತು ವೈಜ್ಞಾನಿಕವಾಗಿ ತುಂಬಾ ಅಭಿವೃದ್ಧಿ ಹೊಂದಿದ್ದು. ಅಲ್ಲದೆ ಅಭಿವೃದ್ಧಿಯ ಕಾರಣದಿಂದಾಗಿ ಮನುಷ್ಯರಲ್ಲಿ ಮೇಲು ಜಾತಿ ಕೀಳು ಜಾತಿ ,ಶ್ರೀಮಂತ ಬಡವ ಹೀಗೆ ಅನೇಕ ರೀತಿಯ ಸಾಮಾಜಿಕ ಮೇಲು ಮತ್ತು ಕೀಳುಗಳು ಸೃಷ್ಟಿಯಾಗಿದ್ದು ಅದೇ ರೀತಿ ಹೆಣ್ಣು ಹಾಗು ಗಂಡು ಸಮಾಜದಲ್ಲಿ, ಕೌಟುಂಬಿಕ ಮತ್ತು ಸಾಮಾಜಿಕ ಜವಾಬ್ದಾರಿ ಸಹಿತ ಒಂದು ಗೌರವಯುತ ಸ್ಥಾನಮಾನವನ್ನು ಪಡೆದರೆ ತೃತೀಯ ಲಿಂಗಿಗಳು ಸಮಾಜದಲ್ಲಿ ಇವತ್ತಿಗೂ ಅಪಮಾನ ಹಾಗೂ ಅ ಗೌರವದಿಂದ ಇರುವುದಲ್ಲದೆ ಸಾಮಾಜಿಕವಾಗಿ ತುಳಿತಕ್ಕೆ ಒಳಗಾದ ಮಾನವರಾಗಿದ್ದಾರೆ.

ಮಾನವ ಸಮಾಜವು ತೃತೀಯ ಲಿಂಗಿಗಳನ್ನು ಅವರ ಮೂಲಭೂತ ಹಕ್ಕುಗಳಿಂದ ಮತ್ತು ಮಾನವಾಧಿಕಾರದಿಂದ ದೂರವಿಟ್ಟಿದ್ದು ಲೈಂಗಿಕ ಅಲ್ಪಸಂಖ್ಯಾತರ ಎಂಬ ಹಣೆಪಟ್ಟಿ ಕಟ್ಟಿ, ಸಮಾಜದ ಯಾವುದೇ ಕ್ಷೇತ್ರದಲ್ಲಿ ಅವಕಾಶಗಳು ದೊರೆಯದಂತೆ ಮಾಡಿರುವುದು ದುರದೃಷ್ಟಕರ. ಕನ್ನಡದಲ್ಲಿ ಮಂಗಳ ಮುಖಿಗಳೆಂದು ಕರೆದರೆ ಉತ್ತರ ಭಾರತದ ಕಡೆ ಇವರನ್ನು ಕಿನ್ನರ ಎಂದು ಕರೆಯುತ್ತಾರೆ. ಇವರ ಜೊತೆ ತಿರಸ್ಕಾರದ ದುರ್ನಡತೆ ಪ್ರಾರಂಭವಾಗುವುದು ಇವರು ಹುಟ್ಟಿದ ಮನೆಯಿಂದಲೇ.ತಿರಸ್ಕಾರ ಹೀಗೆ ಹುಟ್ಟಿದ ಮನೆಯಲ್ಲಿಯೇ ಇವರು ಮಂಗಳಮುಖಿಗಳೆಂದು ಗೊತ್ತಾದಾಗ ಇವರ ಸಂಬಂಧಿಕರು ತಂದೆ-ತಾಯಿಗಳು ಇವರನ್ನು ಸಮಾಜದಿಂದ ದೂರವಿಡಲು ಪ್ರಯತ್ನಿಸುತ್ತಾರೆ .ಇದರಿಂದ ಈ ಜೀವಗಳು ಮನೆಯಿಂದ ದೂರವಾಗಿ ತಮ್ಮದೇ ಆದಂತಹ ಗುಂಪು ಕಟ್ಟಿಕೊಂಡು ಹೊಟ್ಟೆಪಾಡಿಗಾಗಿ ದೊಡ್ಡ ದೊಡ್ಡ ಪಟ್ಟಣಗಳಿಗೆ ವಲಸೆ ಹೋಗಿ ಭಿಕ್ಷಾಟನೆ ಮತ್ತು
ವೇಶ್ಯಾವಾಟಿಕೆ ಅಂತಹ ವೃತ್ತಿಗಳಲ್ಲಿ ತೊಡಗುತ್ತಾರೆ. ಹೀಗೆ ಪಟ್ಟಣಗಳಲ್ಲಿ ಪೊಲೀಸರ ದೌರ್ಜನ್ಯ ಸಮಾಜಘಾತಕ ಶಕ್ತಿಗಳಿಂದ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರದಂತಹ ಘಟನೆಗಳು ಇವರ ಜೀವನವನ್ನು ನರಕಮಯವಾಗಿಸಿವೆ.

ಇನ್ನೊಂದು ವಿಡಂಬಣೆಯೇನೆಂದರೆ ಯಾವ ಸಮಾಜ ಇವರನ್ನು ತಿರಸ್ಕಾರ ಮನೋಭಾವದಿಂದ ನೋಡುತ್ತದೆಯೋ, ಅದೇ ಸಮಾಜ ಇವರನ್ನು ದೈವ ಸಂಭೂತರೆಂದು ಕಂಡು ಇವರಿಂದ ಶುಭವಾಗುತ್ತದೆಂದು ನಂಬುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದೆ. ಗೃಹ ಪ್ರವೇಶ , ಮದುವೆಯಂತಹ ಮಂಗಳ ಕಾರ್ಯಕ್ರಮಗಳಿಗೆ ಇವರನ್ನು ಕರೆಯಿಸಿ ಇವರಿಂದ ಆಶೀರ್ವಾದ ಪಡೆಯುವ ಸಂಪ್ರದಾಯವು ಇದೆ. ಇಂತಹ ನಂಬಿಕೆ ಹೊರತಾಗಿಯೂ ಇಂಥವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ನಮ್ಮ ವ್ಯವಸ್ಥೆಯು ಯಾವುದೇ ರೀತಿಯಾದಂತಹ ಪರಿಣಾಮಕಾರಿಯಾದ ಕ್ರಮ ಕೈಗೊಳ್ಳಲು ವಿಫಲವಾಗಿರುವುದು ನೋಡಿದರೆ ಇಂಥವರು ಮುಖ್ಯ ವಾಹಿನಿಗೆ ಬರಲು ಸಾಧ್ಯವಿಲ್ಲವೇನು ಅನ್ನುವ ಭಾವನೆ ಮೂಡುತ್ತದೆ.

ಧಾರ್ಮಿಕ ದೃಷ್ಟಿಕೋನದಿಂದ ನೋಡಿದಾಗ ಸಾಕ್ಷಾತ್ ಪರಶಿವನ ಅರ್ಧನಾರೀಶ್ವರ ರೂಪದಲ್ಲಿ ಅವತಾರ ಹೊಂದಿರುವುದರಿಂದ ಲೈಂಗಿಕ ಅಲ್ಪಸಂಖ್ಯಾತರನ್ನು ಗೌರವದಿಂದ ಕಾಣುವ ಮನೋಭಾವವನ್ನು ಸಮಾಜದಲ್ಲಿ ಬೆಳೆಸಬೇಕಾಗಿದೆ. ಲೈಂಗಿಕ ನ್ಯೂನ್ಯತೆ ಬಿಟ್ಟರೆ ದೈಹಿಕವಾಗಿ ಇತರ ಮನುಷ್ಯರಂತೆ ಇರುವ ಲೈಂಗಿಕ ಅಲ್ಪಸಂಖ್ಯಾತರು ಇತರ ಮನುಷ್ಯರಂತೆಯೇ ನೋವು ನಲಿವು ಹಸಿವು ಬಾಯಾರಿಕೆ, ಅನಾರೋಗ್ಯ ಅಂತ ಸಮಸ್ಯೆಗಳನ್ನು ಹೊಂದಿದ್ದು ಸಾಮಾನ್ಯ ಮನುಷ್ಯರಾಗಿದ್ದಾರೆ. ಇಂಥವರ ಕಲ್ಯಾಣಕ್ಕಾಗಿ ಸರ್ಕಾರ ಹಾಗೂ ಸಮಾಜವು ಒಂದು ಕಾರ್ಯಕ್ರಮವನ್ನು ರೂಪಿಸಿ ಸಂಘ ಸಂಸ್ಥೆಗಳ ಸಹಾಯದಿಂದ ಇಂತವರಿಗಾಗಿ ಸರ್ಕಾರದಲ್ಲಿ ಮೀಸಲಾತಿಯನ್ನು ಕಲ್ಪಿಸಿ ಇಂತಹ ಜನರು ಅನುಭವಿಸುವ ಕಷ್ಟಕ್ಕೆ ಅಲ್ಪ ಸ್ವಲ್ಪ ಪರಿಹಾರವಾದರೂ ದೊರಕಬಹುದು.

ಇನ್ನು ಇವರನ್ನು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಕೊಡಬಹುದು.ಉದಾಹರಣೆಗಾಗಿ ಪೋಲೀಸ್ ಇಲಾಖೆಯಲ್ಲಿ ಗೃಹರಕ್ಷಕ ದಳದಲ್ಲಿ ಅಗ್ನಿಶಾಮಕ ದಳದಲ್ಲಿ ರೈಲ್ವೆ ಇಲಾಖೆಯಲ್ಲಿ ಮತ್ತು ಖಾಸಗಿ ಕಂಪನಿಯವರು ನಡೆಸುವ ಸೆಕ್ಯೂರಿಟಿ ಏಜೆನ್ಸಿ ಗಳಲ್ಲಿ ಇಂತವರ ನೇಮಕಾತಿಯನ್ನು ಹೆಚ್ಚಿಸಿ ಇವರಿಗೆ ಒಂದು ಉದ್ಯೋಗವನ್ನು ಕಲ್ಪಿಸಿದರೆ ಸಮಾಜದಲ್ಲಿ ಗೌರವಯುತವಾಗಿ ಜೀವನ ನಡೆಸಲು ಒಂದು ದಾರಿ ಮಾಡಿ ಕೊಡಬಹುದು. ಇದರಿಂದಾಗಿ ಸಮಾಜದಲ್ಲಿ ಇವರ ಪ್ರತಿ ಧೋರಣೆ ಬದಲಾಗಿ ಮುಖ್ಯವಾಹಿನಿಗೆ ಬರಲು ಸಹಾಯವಾಗುತ್ತದೆ. ಈ ದಿಶೆಯಲ್ಲಿ ಸರ್ಕಾರ ಹಾಗೂ ಸಮಾಜವು ಒಂದು ದಿಟ್ಟ ಹೆಜ್ಜೆ ಇಡುತ್ತಾ ಕಾದು ನೋಡಬೇಕಿದೆ.

ಶಿವಕುಮಾರ್ ಮಠ ✍️

Leave a Reply

Your email address will not be published. Required fields are marked *