• Mon. Oct 21st, 2024

‘ಸುಖ ಸಂಚಾರಕ್ಕೆ’ ದಾದ ಹಾರೈಕೆ

Byadmin

Sep 19, 2021

ಮೈಸೂರು ರಮಾನಂದ್:


ಮೂಲತ: ಮೈಸೂರಿನವರಾದರಿಂದ ಆ ನೆಲದ ಸಾಂಸ್ಕೃತಿಕ ನಗರಿಯ ಭವ್ಯ ಕಲೆಯ ನಂಟು ತಮ್ಮೊಳಗೆ ಅಡಗಿದೆ. ರಂಗಭೂಮಿಯಿಂದ ಪ್ರಾರಂಭವಾದ ‘ಪಯಣ’ ಚಿತ್ರ ಬದುಕಿನ ಹಲವು ಆಯಾಮಗಳನ್ನು ಸ್ಪರ್ಶಿಸಿ ಪರಾಕಾಯ ಜೀವ ತುಂಬಿದ ಬಣ್ಣದ ಬದುಕು ಇವರದು. ರಂಗಭೂಮಿಯನ್ನು ಅತ್ಯಂತ ಸಮರ್ಪಕವಾಗಿ ಅಷ್ಟೇ ಅಲ್ಲದೆ ಪರಿಣಾಮಕಾರಿಯಾಗಿ ಬಳಸಿಕೊಂಡ ಅಗ್ರ ಪಂಕ್ತಿಯ ಕಲಾವಿದರು. ಜನರ ವಾಸ್ತವದ ನಾಡಿ ಮಿಡಿತ ಅರಿತು ಸಾಮಾಜಿಕ ಸಂದೇಶದ ಜೊತೆಗೆ ಹಾಸ್ಯ ಲೇಪನ ಮೂಲಕ ಜನರಿಗೆ ಹತ್ತಿರವಾದರು.ಇವರ ಹಾಸ್ಯಭರಿತ ನಾಟಕ ಕಚಗುಳಿ ಇಡುವುದಷ್ಟೆ ಅಲ್ಲದೆ ಸಾಂತ್ವನದ ಔಷಧಿ. ಬದಲಾಗಬೇಕಿರುವ ಹಲವರಿಗೆ ಇವರ ನಾಟಕ ಚುಚ್ಚು ಮದ್ದು.



ಅಂತಹ ರಮಾನಂದ್ ‘ಸರ್ ಅವರ ನಾಟಕ ಮಂದಿರದಂತಿರುವ ಸಾವಿರಾರು ಪ್ರಶಸ್ತಿಗಳು ತುಂಬಿರುವ ತಮ್ಮ ಮನೆ ಅಂಗಳದಲ್ಲಿ ದಾದ ಡಾ.ವಿಷ್ಣುವರ್ಧನ್ ಅವರ ಕುರಿತು ನನ್ನೊಂದಿಗೆ ಆಡಿದ ಮಾತುಗಳು ನಿಮ್ಮ ಮುಂದೆ..

ವಿಷ್ಣು ಸರ್ ಅವರಲ್ಲಿ ನಾನು ದೊಡ್ಡ ಕಲಾವಿದ ಅನ್ನೋ ಭಾವನೆ ಇರಲಿಲ್ಲ..ನಾನು ಅವರ ಜೊತೆ ಅಭಿನಯಿಸಿದ ಮೊದಲ ಚಿತ್ರ ‘ಮಹಾ ಕ್ಷತ್ರಿಯ’ .ಆಗ ನನನ್ನು ಅತ್ಯಂತ ಪ್ರೀತಿಯಿಂದ ಮಾತನಾಡಿಸುತ್ತಿದ್ದರು.
ನಾನು ಅವರೊಂದಿಗೆ ಚಿತ್ರೀಕರಣದಲ್ಲಿ ಬಿಡುವಿದ್ದಾಗ ಕೆಲವು ಹಾಸ್ಯ ತುಣುಕು ಸನ್ನಿವೇಶವನ್ನು ಹೇಳುತ್ತಿದ್ದೆ ತುಂಬಾ ಸಂತೋಷ ಪಡೋವ್ರು. ಮೈಸೂರಿನಲ್ಲಿ ಚಿತ್ರೀಕರಣವಿದ್ದಾಗ ಅವರು ಬೆಳಗಿನ ಜಾವ ವ್ಯಾಯಾಮ ಮುಗಿಸಿ ವಾಯು ವಿಹಾರಕ್ಕೆ ಹೋಗುವಾಗ ನನನ್ನು ಕರೆಯೋವ್ರು ಅವರ ಜೊತೆಗೆ ಹೋಗುವುದೆ ಖುಷಿ ಅದರಲ್ಲಿಯೂ ಪ್ರೀತಿಯಿಂದ ಅವರು ಬೆನ್ನಿಗೆ ಹೊಡೆಯೋವ್ರು.ತುಂಬಾ ಆತ್ಮೀಯರಿಗೆ ಆ ರೀತಿ ಮಾಡ್ತಾ ಇದ್ರು.ಅವರ ಆತ್ಮೀಯತೆ ಸಿಕಿದ್ದು ನಮ್ಮ ಸೌಭಾಗ್ಯ.ಅವರು ರಸ್ತೆಯಲ್ಲಿ ಬಿರುಸಾಗಿ ನೆಡೆದು ಹೋಗ್ತಾ ಇರೋವ್ರು ಪಕ್ಕದಲ್ಲಿ ಯಾವುದಾದರು ಬಸ್ ಬಂದ್ರೆ ಮುಖ ಕಾಣದ ಹಾಗೆ ಕೈ ಅಡ್ಡ ಹಿಡಿದುಕೊಳ್ಳೋವ್ರು.


ಜನಕ್ಕೆ ಗೊತ್ತಾದ್ರೆ ರಸ್ತೆಯಲ್ಲ ತುಂಬಿ ಜಾತ್ರೆ ಸೇರಿದ ಹಾಗೆ ಸೇರೋವ್ರು. ಅವರು ಸಹ ಕಲಾವಿದರ ಕಲೆಯನ್ನು ಗುರುತಿಸಿ ಬೇರೆಯವರ ಹತ್ತಿರ ಹೇಳುತ್ತಿದ್ದರು..ನನ್ನ ಕುರಿತು ಚಿತ್ರ ನಿರ್ದೇಶಕರೊಬ್ಬರ ಹತ್ತಿರ ಈ ವ್ಯಕ್ತಿಗೆ ಒಳ್ಳೆಯ ಪಾತ್ರ ಸಿಕ್ಕರೆ ತುಂಬಾ ದೊಡ್ಡ ಮಟ್ಟದಲ್ಲಿ ಬೆಳೆದು ಬಿಡುತ್ತಾರೆ..ಅವರಿಗೆ ಅಂತಹ ಪಾತ್ರಗಳು ಸಿಕ್ಕಿಲ್ಲ ಸಿಗಬೇಕು ಅನ್ನೋ ಅವರ ಕಾಳಜಿ ನನ್ನ ಕಿವಿಗೆ ಬಿತ್ತು..ನಿಜವಾಗಲೂ ಅಂತಹ ದೊಡ್ಡ ಕಲಾವಿದರು ನನ್ನ ಬಗ್ಗೆ ಈ ರೀತಿ ಮಾತನಾಡುತ್ತಾರೆ ಅಂದರೆ ನಿಜಕ್ಕೂ ನನಗೆ ಮಾತು ಹೊರಡಲ್ಲ.. ವಿಷ್ಣು ಸರ್ ಅವರನ್ನು ನನಗೆ ಮೊದಲು ಪರಿಚಯಿಸಿದ್ದು ರೆಬೆಲ್ ಸ್ಟಾರ್ ಅಂಬರೀಷ್ ಅವರು 1973 ರಲ್ಲಿ ಸೀತೆ ಅಲ್ಲ ಸಾವಿತ್ರಿ ಚಿತ್ರೀಕರಣ ಸಂದರ್ಭ ಪ್ರೀಮಿಯರ್ ಸ್ಟುಡಿಯೋದಲ್ಲಿ ನಡಿತಾ ಇತ್ತು. ನಾನು ನಮ್ಮ ಸ್ನೇಹಿತರನೆಲ್ಲಾ ಕರೆದುಕೊಂಡು ಅಂಬರೀಷ್ ಅವರ ಜೊತೆಗೆ ಹೋಗಿದ್ದೆ. ಅಂಬರೀಷ್ ಅವರು ನನಗೆ ತುಂಬಾ ವರ್ಷಗಳ ಪರಿಚಯ.ಅವರು ವಿಷ್ಣು ಸರ್ ಅವರನ್ನ ಕುಮಾರ್ ಅಂತ ಕರೀತಾ ಇದ್ರು. ಕುಮಾರ ಇಲ್ನೋಡೊ ನಮ್ಮ ಏರಿಯಾ ಹುಡುಗರು ಬಂದಿದ್ದಾರೆ. ಇವರೆಲ್ಲಾ ನಮ್ಮ ಏರಿಯಾದವರೆ ಜಾಲಿ ಬ್ರದರ್ಸ್
ಅಂತ ನಮನ್ನೆಲ್ಲಾ ಪರಿಚಯ ಮಾಡಿಕೊಟ್ರು. ನನ್ನ ಸ್ನೀಹಿತರೆಲ್ಲಾ ವಿಷ್ಣು ಸರ್ ಅವರ ಹತ್ತಿರ ಸಹಿ ತಗೊಂಡ್ರು.ಅವರು ಎಡಗೈನಲ್ಲಿ ಸಹಿ ಮಾಡಿದ್ರು.. ಬಂದವರನೆಲ್ಲಾ ತುಂಬಾ ಪ್ರೀತಿಯಿಂದ ಮಾತನಾಡಿಸಿದ್ರು..ಅವರು ನ್ಯಾಷನಲ್ ಕಾಲೇಜಿನಲ್ಲಿ ವಿಷ್ಣುವರ್ಧನ್ ಮ್ಯೂಸಿಕಲ್ ನೈಟ್ ಅಂತ ಕಾರ್ಯಕ್ರಮ ಮಾಡಿದ್ರು. ಅದರಲ್ಲಿ ಕನ್ನಡ ಚಿತ್ರರಂಗದ ಎಲ್ಲಾ ಕಲಾವಿದರು ಹಾಸ್ಯ ಕಲಾವಿದರೆಲ್ಲಾ ಇದ್ದರು.ಅಲ್ಲಿ ಹಾಸ್ಯ ಕಲಾವಿದರಾದ ಸರಿಗಮವಿಜಿ, ಉಮೇಶಣ್ಣ,ಡಿಂಗ್ರಿ ನಾಗ್ ರಾಜ್ ಅವರೆಲ್ಲಾ ಹಾಸ್ಯದ ತುಣುಕುಗಳನ್ನು ಮಾಡಿದರು. ನಾನು ಮೂಕ್ಕಾಲು ಗಂಟೆಯ ಒಂದು ನಾಟಕ ಮಾಡಿದೆ..ನಾನು ಆಗಷ್ಟೆ ಚಿತ್ರರಂಗಕ್ಕೆ ಪಾದರ್ಪಣೆ ಮಾಡ್ತಾ ಇದ್ದೆ. ಆ ನಾಟಕದಲ್ಲಿ ನನ್ನ ಅಭಿನಯ ನೋಡಿದ ಸುಂದರ್ ರಾಜ್ ಅವರ ಮುಂದಿನ ಚಿತ್ರದಲ್ಲಿ ಅವಕಾಶ ಕೊಟ್ಟರು. ವಿಷ್ಣು ಸರ್ ನನ್ನ ಅಭಿನಯ ತುಂಬಾ ಇಷ್ಟಪಟ್ಟು ಪ್ರಶಂಸಿಸಿದರು.ಅವರು ಮೂಲತ: ರಂಗಭೂಮಿಯಿಂದ ಬಂದವರಲ್ವಾ ಹಾಗಾಗಿ ರಂಗಭೂಮಿ ಮೇಲೆ ಅವರಿಗೆ ವಿಶೇಷವಾದ ಗೌರವವಿತ್ತು.ಅವರು ಕಾಲೇಜಿನ ದೆಸೆಯಲ್ಲಿ ಮಾಡಿದ ಹೆಣ್ಣಿನ ಪಾತ್ರವೆ ಅದಕ್ಕೆ ಸಾಕ್ಷಿ. ನನ್ನ ‘ಟ್ರಾಫಿಕ್ಕಾಯಾಣ’ ನಾಟಕ ಕೃತಿಗೆ ವಿಷ್ಣು ಸರ್ ಅವರಿಂದ ಬೆನ್ನುಡಿ ಬರೆಸುವ ಆಸೆ ನನ್ನಲ್ಲಿ ಬಹಳವಾಗಿತ್ತು..ಆದರೆ ಸಂಕೋಚದ ಜೊತೆಗೆ ಅಷ್ಟು ದೊಡ್ಡ ಕಲಾವಿದರನ್ನು ಹೇಗೆ ಕೇಳೋಣ ಅಂತ ಏನು ಕೇಳದೆ ಸುಮ್ಮನಾಗಿದ್ದೆ. ಅವರ ಆಪ್ತ ಶಿಷ್ಯರಾದ ವಿ.ಆರ್ ಭಾಸ್ಕರ್ ಅವರಿಗೆ ವಿಷಯ ಮುಟ್ಟಿಸಿದೆ.ಅವರು ಪುಸ್ತಕ ಕೊಡಿ ಅಂತ ನನ್ನಿಂದ ವಿಷ್ಣು ಸರ್ ಗೆ ಮುಟ್ಟಿಸಿದ್ರು. ವಿಷ್ಣು ಸರ್ ಸಂಪೂರ್ಣ ಪುಸ್ತಕ ಓದಿ ತುಂಬಾ ಚೆನ್ನಾಗಿದೆ ಅಂತ ಮನೆಗೆ ಕರೆಸಿ ಶುಭವಾಗಲಿ ಅಂತ ಹಾರೈಸಿ. ಪುಸ್ತಕಕ್ಕೆ ಬೆನ್ನುಡಿ ಬರೆದು ಕೊಟ್ಟರು. ಅವರು ಬಹಳ ಬೇಗನೆ ನಮ್ಮಿಂದ ದೂರಾದರು ಇನ್ನು ಇರಬೇಕಿತ್ತು ಅಂತಹ ಸಜ್ಜನರು, ಮಹನೀಯರು. ಸಾಕಷ್ಟು ಜನಕ್ಕೆ ಸಹಾಯ ಮಾಡಿದ್ದಾರೆ.

ಕನ್ನಡ ಚಿತ್ರರಂಗದ ನಾಯಕತ್ವಕ್ಕೆ,ನಾಡು ನುಡಿ ಸೇವೆಗೆ ಅವರ ಅವಶ್ಯಕತೆ ತುಂಬಾ ಇತ್ತು.


ಅವರ ದೊಡ್ಡ ಗುಣ ಎಂತದ್ದು ಅಂದ್ರೆ ಆಪ್ತಮಿತ್ರ ಶತದಿನೋತ್ಸವ ಕಾರ್ಯಕ್ರಮಕ್ಕೆ ಕಲಾವಿದರನ್ನಷ್ಟೆ ಅಲ್ಲದೆ ನಿಮ್ಮ ಮನೆಯವರನೆಲ್ಲಾ ಕರೆದುಕೊಂಡು ಬನ್ನಿ ಅಂದಿದ್ರು.ವಿಷ್ಣು ಸರ್ ಮತ್ತೆ ವಾಸು ಕಾರ್ಯಕ್ರಮ ಮಾಡಿದ್ದು..ವಿಷ್ಣು ಸರ್ ಸಾಕಷ್ಟು ಹಣ ಖರ್ಚು ಮಾಡಿದ್ರು.ಅದು ನಾಯಕ ನಟರಾದವರು ಮಾಡುವ ಕಾರ್ಯಕ್ರಮವಾಗಿರಲ್ಲಿಲ್ಲ.ನಿಮಗೆ ಗೊತ್ತಿದೆ ಅಂತ ರಮಾನಂದ್ ಸರ್ ಮಾತಿನ ಮಧ್ಯೆ ನಗು ಬೀರಿದರು. ಬಂದವರಿಗೆಲ್ಲಾ ಎರಡು ಬೆಳ್ಳಿ ಲೋಟ ಕೊಟ್ಟರು.ನಾನು ನಮ್ಮ ಮನೆಯವರನೆಲ್ಲಾ ಕರೆದುಕೊಂಡು ಹೋಗಿದ್ದೆ. ಅತ್ಯಂತ ಆತ್ಮೀಯವಾಗಿ ನಮ್ಮನ್ನು ಬರಮಾಡಿಕೊಂಡರು ನನ್ನ ಮಗಳನ್ನು ಭಾರತಿ ಅವರು ಎತ್ತಿಕೊಂಡು ಮುದ್ದು ಮಾಡ್ತ ಇದ್ದರು. ಆಗ ನನ್ನ ಮಗನಿಗೆ ಎರಡು ವರ್ಷ ವಯಸ್ಸು ನನ್ನ ಮಗ ನನನ್ನು ವಿಷ್ಣು ಅಂಕಲ್ ಗೆ ಪರಿಚಯ ಮಾಡಿಸು ಅಂದ. ನಾನು ತಮಾಷೆಗೆ ನಿನಗೆ ಮಾತು ಬರಲ್ವ ಹೋಗೋ ನೀನೆ ಮಾತಾಡೋ ಅಂದೆ.ಅವರ ಹತ್ತಿರ ಹೋದವನೆ..ಹಲೋ ವಿಷ್ಣು ಅಂಕಲ್ ಹೇಗಿದ್ದೀರಾ? ಅಂದ ಜೋರಾಗಿ. ಅವರು ಕೆನ್ನೆ ಮೇಲೆ ಕೈ ಇಟ್ಟುಕೊಂಡು ಈ ಕಡೆ ತಿರುಗಿ ಏನಪ್ಪ ಇಷ್ಟು ಜೋರಾಗಿ ಮಾತಾಡ್ತೀಯಾ..ಯಾರು ನಿಮ್ಮಪ್ಪ ಅಂದ್ರು.ಅಲ್ಲಿದ್ದಾರೆ ನೋಡಿ ಅಂತ ನನ್ನ ಕಡೆ ಕೈ ತೋರಿಸಿದ..ಅವರು ಹೋ…ಮೈಸೂರು ರಮಾನಂದ. ಅದಕ್ಕೆ ಇಷ್ಟು ಜೋರಾಗಿ ಮಾತಾಡ್ತೀಯಾ ಅಂತ ನಕ್ಕರು..ಅವನ ತಲೆ ಸವರುತ್ತ..ಏನು ಓದುತ್ತಿದ್ದೀಯಾ ಅಂತ ಮಾತನಾಡಿಸಿದ್ರು. ಅವರಲ್ಲಿ ಸಂಸ್ಕಾರ, ಸೌಜನ್ಯವಿತ್ತು. ಅಂತಹ ಕಲಾವಿದರು ಸಿಗಲ್ಲ. ಬಹಳ ಹಿಂದೆ ಆ ರೀತಿ ಕಲಾವಿದರನ್ನು ಕರೆಸಿ ಸನ್ಮಾನಿಸುತ್ತಿದ್ದ ಸಂಪ್ರಾದಯವಿತ್ತು..ಬೆಳ್ಳಿ ಲೋಟ ಕೊಟ್ಟು ಆ ರೀತಿ ಮಾಡಿದ್ದು ಇತ್ತೀಚಿನ ದಿನಗಳಲ್ಲಿ ಯಾರು ಮಾಡಿಲ್ಲ.. ಸಹ ಕಲಾವಿದರನ್ನು ಆ ರೀತಿ ನೆಡೆಸಿಕೊಳ್ಳುವುದು ಇರಲಿ..ಸರಿಯಾಗಿ ಮಾತನಾಡಿಸುವುದೆ ಇಲ್ಲ ಅಂತ ವಿಷ್ಣು ದಾದ ಅವರನ್ನು ಸ್ಮರಿಸುತ್ತ ಮೌನವಾದರು..


•ವಿನೋದ್ ಕುಮಾರ್.ಬಿ ✍

Leave a Reply

Your email address will not be published. Required fields are marked *