• Tue. Jul 23rd, 2024

ಬಿಹಾರದ’ ಬದಲು ರಾಮ’ ರಾಜಕೀಯ

Byadmin

Aug 15, 2022ಭಾರತೀಯ ರಾಜಕಾರಣದಲ್ಲಿ ಸಕ್ರಿಯವಾಗಿರುವ ರಾಜಕೀಯ ಪಕ್ಷಗಳನ್ನು ನೋಡಿದರೆ ರಾಜಕೀಯವಾಗಿ ಯಾರೂ ಶಾಶ್ವತ ಗೆಳೆಯರು ಇಲ್ಲ ಮತ್ತು ಹಾಗೇನೇ ಶಾಶ್ವತ ವೈರಿಗಳು ಇಲ್ಲ. ಅಷ್ಟೇ ಅಲ್ಲದೆ ರಾಜಕೀಯ ಪಕ್ಷಗಳಿಗೆ ತತ್ವ ಸಿದ್ಧಾಂತ ಮತ್ತು ಬದ್ಧತೆ ಅನ್ನುವುದು ಇಲ್ಲವೇ ಇಲ್ಲ ಅನ್ನುವ ಮಟ್ಟಿಗೆ ಅಧಿಕಾರದ ದಾಹದಿಂದ ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳುವ ರೀತಿಯನ್ನು ನೋಡಿದರೆ ಇವರಿಗೆ ದೇಶ ಮತ್ತು ರಾಜ್ಯದ ಅಭಿವೃದ್ಧಿಗಿಂತ ವೈಯಕ್ತಿಕ ಪ್ರತಿಷ್ಠೆ ಹಾಗೂ ಒಬ್ಬರನ್ನೊಬ್ಬರು ಕಾಲು ಎಳೆಯುವ ಪ್ರಕ್ರಿಯೆ ಮುಖ್ಯವಾದಂತೆ ತೋರುತ್ತದೆ. ಇದಕ್ಕೆ ಇತ್ತೀಚಿನ ತಾಜಾ ನಿದರ್ಶನವೆಂದರೆ ಬಿಹಾರದ ರಾಜಕೀಯ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ
ನಿತೀಶ್ ಕುಮಾರ್ ನೇತೃತ್ವದ ಜನತಾದಳ ಯುನೈಟೆಡ್ ಪಕ್ಷವು ಭಾರತೀಯ ಜನತಾ ಪಕ್ಷದ ನೇತೃತ್ವದ ಎನ್.ಡಿ.ಎ ಮೈತ್ರಿಕೂಟದ ಜೊತೆ ಒಪ್ಪಂದ ಮಾಡಿಕೊಂಡು ಚುನಾವಣೆಯನ್ನು ಎದುರಿಸಿ ಬಹುಮತ ಪಡೆದಿದ್ದವು. ಆದರೆ ಜನತಾದಳ ಯುನೈಟೆಡ್ ಪಕ್ಷಕ್ಕೆ ನಿರೀಕ್ಷೆಗಿಂತ ಕಡಿಮೆ ಸೀಟುಗಳು ಲಭ್ಯವಾಗಿ ಅಂದರೆ 45 ಸೀಟುಗಳು ಮತ್ತು ಭಾರತೀಯ ಜನತಾ ಪಕ್ಷಕ್ಕೆ 77 ಸೀಟುಗಳು ಲಭ್ಯವಾಗಿ ಭಾರತೀಯ ಜನತಾ ಪಕ್ಷ ಅತಿ ದೊಡ್ಡ ಪಕ್ಷವಾದರೂ ಸಹ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಿ ಸರ್ಕಾರ ರಚಿಸಿದವು. ಎರಡು ವರ್ಷಗಳ ನಂತರ ಮತ್ತೆ ಮೈತ್ರಿಯಲ್ಲಿ ಬಿರುಕು ಮೂಡಿ ನಿತೀಶ್ ಕುಮಾರ್ ಬಿಜೆಪಿಯ ಜೊತೆಗೆ ಮೈತ್ರಿಯನ್ನು ಕಡಿದುಕೊಂಡು ವಿಪಕ್ಷಗಳಾದ ಲಾಲು ಪ್ರಸಾದ್ ಯಾದವರ ನೇತೃತ್ವದ ಆರ್ ಜಿಡಿ ಮತ್ತು ಕಾಂಗ್ರೆಸ್ ಜೊತೆಗೂಡಿ ಹೊಸ ಸರ್ಕಾರವನ್ನು ರಚಿಸಿದ್ದಾರೆ. ಅವರ ಈ ರೀತಿಯಾದಂತಹ ಯೂ ಟರ್ನ್ ರಾಜಕೀಯ ಇದೇ ಮೊದಲಲ್ಲ.

28 ವರ್ಷಗಳಿಂದ ಬಿಜೆಪಿ ನೇತೃತ್ವದ ಎನ್.ಡಿ.ಎ ಭಾಗವಾಗಿದ್ದ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷವು, 2014ರಲ್ಲಿ ಬಿಜೆಪಿಯು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಂತ್ರಿಯ ಅಭ್ಯರ್ಥಿಯನ್ನಾಗಿ ಘೋಷಿಸಿದ ನಂತರ ಅಸಮಾಧಾನ ಗೊಂಡ ನಿತೀಶ್ ಕುಮಾರ್ ಅವರು ಎನ್.ಡಿ.ಎ ಮೈತ್ರಿಕೂಟದಿಂದ ಹೊರಬಂದು ವಿಪಕ್ಷಗಳ ಜೊತೆ ಸೇರಿ ಮೈತ್ರಿ ರಚಿಸಿಕೊಂಡು ಚುನಾವಣೆಯನ್ನು ಎದುರಿಸಿದವು. ಮುಂದೆ ಚುನಾವಣೆಯ ನಂತರ ದೇಶದಲ್ಲಿ ಎನ್.ಡಿ.ಎ ಸರ್ಕಾರ ಅಸ್ತಿತ್ವಕ್ಕೆ ಬಂದಿತು.


ಶ್ರೀ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾದರು. ಬಿಜೆಪಿಯ ಮೇಲೆ ಹಗೆ ಸಾಧಿಸಲು ಹೋದ ನಿತೀಶ್ ಕುಮಾರ್ ಮುಖಭಂಗ ಅನುಭವಿಸಿ, ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬೇರೆ ಬೇರೆ ಪಕ್ಷಗಳ ಸರ್ಕಾರವಿದ್ದರೆ ರಾಜಕೀಯ ಲಾಭ ಪಡೆಯಲು ಆಗದು ಎಂದು ತೀರ್ಮಾನಿಸಿ, ಮತ್ತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ಜೊತೆ ತಮ್ಮ ಸಂಬಂಧವನ್ನು ಸರಿಪಡಿಸಿಕೊಂಡು ತಮ್ಮ ಮಿತ್ರ ಪಕ್ಷವಾದ ಆರ್ ಜೆಡಿಯ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿ ಮಹಾಘಟ ಬಂಧನದಿಂದ ಹೊರಬಂದು ಬಿಜೆಪಿ ಜೊತೆ ಸರ್ಕಾರ ರಚಿಸಿದರು. ಇಲ್ಲಿಗೆ ನಿತೀಶ್ ಕುಮಾರ್ ಅವರು ಎರಡನಯ ಯು ಟರ್ನ್ ಹೊಡೆದದ್ದು ಆಯಿತು.

ಇನ್ನು ಹೊಸ ಸರ್ಕಾರ ಬಂದು ವಿಶ್ವಾಸಮತದ ಸಂದರ್ಭದಲ್ಲಿ, ವಿಧಾನಸಭೆಯಲ್ಲಿ ಮಾತನಾಡುತ್ತಾ ಭ್ರಷ್ಟಾಚಾರ ಮಾಡುವ ಪಕ್ಷಗಳೊಂದಿಗೆ ಮತ್ತು ವ್ಯಕ್ತಿಗಳೊಂದಿಗೆ ಇನ್ನೆಂದೂ ಸರ್ಕಾರ ರಚಿಸುವುದಿಲ್ಲ ಎಂದು ಸರ್ವ ಸದಸ್ಯರಿಗೂ ಘಂಟಾಘೋಷವಾಗಿ ಹೇಳಿಕೆ ನೀಡಿ ಆರ್‌ಜೆಡಿ ಒಂದು ಭ್ರಷ್ಟ ಪಕ್ಷ ಎಂದು ದೂರಿದರು. ಇನ್ನು ತಮ್ಮ ಪಕ್ಷದ ಜೊತೆ ಮೈತ್ರಿ ಕಡೆದುಕೊಂಡು ಬಿಜೆಪಿ ಜೊತೆ ಮೈತ್ರಿ ಮಾಡಿ ಹೊಸ ಸರ್ಕಾರ ರಚಿಸಿದ್ದ ನಿತೀಶ್ ಕುಮಾರ್ ಅವರನ್ನು ಖಂಡಿಸುತ್ತಾ ಮಾತನಾಡಿದ ಲಾಲು ಪ್ರಸಾದ್ ಯಾದವ್ ಅವರು ನಿತೀಶ್ ಕುಮಾರ್ ಅವರನ್ನು ವಿಷ ಸರ್ಪವೆಂದು ಜರಿದರು. ಹೀಗೆ ಈ ಮೈತ್ರಿ 2020 ರ ವಿಧಾನಸಭಾ ಚುನಾವಣೆವರೆಗೂ ಮುಂದುವರೆದು ಮತ್ತೆ ಬಿಜೆಪಿ ನೇತೃತ್ವದ ಎನ್ ಡಿ ಎ ಅಧಿಕಾರಕ್ಕೆ ಬಂದು ನಿತೀಶ್ ಕುಮಾರ್ ಮುಖ್ಯಮಂತ್ರಿಯಾದರು.

ಆದರೆ ಮತ್ತೆ ಎರಡು ವರ್ಷದಲ್ಲಿಯೇ ಯುಟರ್ನ್ ಹೊಡೆದ ನಿತೀಶ್ ಕುಮಾರ್ ಬಿಜೆಪಿ ಜೊತೆ ಮೈತ್ರಿಯನ್ನು ಕಡೆದುಕೊಂಡು ಆರ್ ಜೆ ಡಿ ಜೊತೆ ಸೇರಿ ಸರ್ಕಾರವನ್ನು ರಚಿಸಿದ್ದಾರೆ. ಮತ್ತೊಮ್ಮೆ ನಿತೀಶ್ ಕುಮಾರ್ ಅವರು ರಾಜಕೀಯದಲ್ಲಿ ವಿಶ್ವಾಸದ ವ್ಯಕ್ತಿ ಅಲ್ಲ ಎಂಬುದು ಸಾಬೀತಾಗಿದೆ. ಇನ್ನು ಮೈತ್ರಿ ಮುರಿದುದ್ದಕ್ಕೆ ಬಿಜೆಪಿ ಮೇಲೆ ಆರೋಪ ಮಾಡಿರುವ ನಿತೀಶ್ ಕುಮಾರ್ ಅವರು ಬಿಜೆಪಿಯು ತಮ್ಮ ಪಕ್ಷವನ್ನು ಮಹಾರಾಷ್ಟ್ರದ ರೀತಿಯಲ್ಲಿ ಒಡೆಯಲು ಪ್ರಯತ್ನಿಸಿತು, ಮತ್ತು ಬಿಹಾರದ ರಾಜಕೀಯದಲ್ಲಿ ಬಿಜೆಪಿಯ ಕೇಂದ್ರದ ಮಂತ್ರಿಗಳು ನೇರವಾಗಿ ಹಸ್ತಕ್ಷೇಪ ಮಾಡುತ್ತಿರುವುದಾಗಿ ಹೇಳಿದ್ದಾರೆ.

ಆದರೆ ರಾಜಕೀಯ ಪಂಡಿತರ ಲೆಕ್ಕಾಚಾರದ ಪ್ರಕಾರ ನಿತೀಶ್ ಕುಮಾರ್ ಅವರು 2024ರ ಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಮಂತ್ರಿ ಹುದ್ದೆಗೆ ಕಣ್ಣಿಟ್ಟಿದ್ದು, ಮೋದಿಯವರನ್ನು ಎದುರಿಸುವ ಅರ್ಹ ಅಭ್ಯರ್ಥಿ ಮತ್ತು ಒಮ್ಮತದ ಅಭ್ಯರ್ಥಿ ವಿಪಕ್ಷಗಳಲ್ಲಿ ಇಲ್ಲದೇ ಇರುವುದರಿಂದ ತಾವು ವಿಪಕ್ಷಯ ಪಾಳ್ಯಕ್ಕೆ ಸೇರಿದರೆ ತಮಗೆ ಒಂದು ಅವಕಾಶ ಬಂದು ತಾವು ಪ್ರಧಾನಮಂತ್ರಿಯಾಗಬಹುದು ಎಂಬ ರಾಜಕೀಯ ದೂರಲೋಚನೆ ಅವರನ್ನು ಈ ರೀತಿಯಾದಂತಹ ಕ್ರಮ ಕೈಗೊಳ್ಳಲು ಉತ್ತೇಜಿಸಿರಬಹುದು. ಆದರೆ ಇನ್ನು ಕೆಲವು ರಾಜಕೀಯ ಪಂಡಿತರ ಪ್ರಕಾರ ಕಳೆದ ಕೆಲವು ವರ್ಷಗಳಲ್ಲಿ ನಿತೀಶ್ ಕುಮಾರ್ ಅವರ ಜನಪ್ರೀತಿಯಲ್ಲಿ ಕುಸಿತವಾಗುತ್ತಿದ್ದು ಅವರ ಪಕ್ಷದ ವೋಟ್ ಗಳಿಕೆ ಪ್ರಮಾಣದಲ್ಲಿಯೂ ಕುಸಿತ ದಾಖಲಾಗಿದ್ದು ಬಿಜೆಪಿಯ ಜೊತೆ ಮುಂದುವರೆದರೆ ಅಲ್ಪಸಂಖ್ಯಾತ ಹಾಗೂ ದಲಿತ ಮತಗಳು ಕೈ ತಪ್ಪುವ ಸಂಭವವಿದ್ದು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ್ತಷ್ಟು ಹೆಚ್ಚು ಸೀಟುಗಳು ಲಭಿಸಿ ತಮ್ಮ ಪಕ್ಷಕ್ಕೆ ದೊಡ್ಡಣ್ಣನ ಸ್ಥಾನ ಕೈತಪ್ಪಿ, ಬಿಜೆಪಿಗೆ ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟು ಕೊಡಬೇಕಾಗಿ ಬರುವುದು ಬೇಕಾಗಿರಲಿಲ್ಲ.

ಅಲ್ಲದೆ ಬಿಜೆಪಿ ಜೊತೆಗೇನೆ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಹುದ್ದೆಯ ಜೊತೆ ಗೃಹ ಖಾತೆಯನ್ನು ಹೊಂದಿದ್ದ ನಿತೀಶ್ ಕುಮಾರ್ ಅವರಿಗೆ ಮುಜುಗರ ಆಗುವಂತಹ ಸಾಕಷ್ಟು ಘಟನೆಗಳು ಸಂಭವಿಸಿದ್ದು ಅದರಲ್ಲಿ ಇತ್ತೀಚಿಗೆ ಕೇಂದ್ರದ ತನಿಖಾ ದಳಗಳು ಇಸ್ಲಾಂ ಮೂಲಭೂತವಾದಿಗಳನ್ನು ಬಿಹಾರದಲ್ಲಿ ಬಂಧಿಸಿದ್ದು ಅಲ್ಲದೆ ಸಾಕಷ್ಟು ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡು ಪ್ರಕರಣಗಳನ್ನು ದಾಖಲಿಸಿದ್ದು ನಿತೀಶ್ ಕುಮಾರ್ ಅವರಿಗೆ ನುಂಗಲಾರದ ತುತ್ತಾಗಿತ್ತು. ಇದಲ್ಲದೆ ಸುಶಾಸನ ಬಾಬು ಎಂದು ಪ್ರಸಿದ್ಧ ಆಗಿದ್ದ ನಿತೀಶ್ ಕುಮಾರ್ ಇತ್ತೀಚಿನ ಕೆಲವು ವರ್ಷಗಳಲ್ಲಿ ಆಡಳಿತದ ಕಾರ್ಯ ಕ್ಷಮತೆ
ಕುಸಿಯುತ್ತಿದ್ದು ಆಡಳಿತದ ಯಂತ್ರದ ಮೇಲೆ ನಿಯಂತ್ರಣವನ್ನು ಕಳೆದುಕೊಂಡಂತೆ ಗೋಚರಿಸುತ್ತಿತ್ತು. ಅಲ್ಲದೆ ಅಲ್ಪಸಂಖ್ಯಾತರಲ್ಲಿ ಪ್ರಮುಖವಾದ ಮುಸ್ಲಿಂ ಮತಗಳನ್ನು ಕಳೆದುಕೊಳ್ಳುವ ಭೀತಿ ಎದುರಾಗಿ ಜೆಡಿಯು ಪಕ್ಷದ ಅಸ್ತಿತ್ವಕ್ಕೆ ಹೊಡೆತ ಬೀಳುವ ಸಂಭವವಿದ್ದು ಆರ್‌ಜೆಡಿ ಹಾಗೂ ಕಾಂಗ್ರೆಸ್ ಜೊತೆ ಹೋದರೆ ಮತ್ತೆ ಮುಸ್ಲಿಂ ಮತಗಳನ್ನು ಹಿಡಿದಿಟ್ಟುಕೊಳ್ಳಬಹುದೆಂಬ ರಾಜಕೀಯ ಲೆಕ್ಕಾಚಾರ ಅಡಗಿದೆ.

ಈ ರೀತಿಯ ರಾಜಕೀಯ ಓಲೈಕೆ ರಾಜಕಾರಣವನ್ನು ನಿತೀಶ್ ಕುಮಾರ್ ಅವರು ಇದೇ ಮೊದಲು ಮಾಡುತ್ತಿಲ್ಲ. ಹಿಂದೆ ಇಸ್ರತ್ ಜಾನ್ ಎಂಬ ಮಹಿಳಾ ಉಗ್ರವಾದಿಯನ್ನು ಗುಜರಾತ್ ಪೊಲೀಸರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹತ್ಯೆಯನ್ನು ತಪ್ಪಿಸುವ ಉದ್ದೇಶದಿಂದ ಎನ್ ಕೌಂಟರ್ ಮಾಡಿದಾಗ ಅವಳನ್ನು ಬಿಹಾರದ ಹೆಮ್ಮೆಯ ಮಗಳೆಂದು ಕರೆದು ಅಲ್ಪಸಂಖ್ಯಾತರ ಮತಕ್ಕೆ ಗಾಳ ಹಾಕಿದ ವ್ಯಕ್ತಿ ಇವರು.

ಅಲ್ಲದೆ ಐಸಿಸ್ ಹಾಗೂ ಉಗ್ರಗಾಮಿ ಸಂಘಟನೆಗಳಲ್ಲಿ ಸಕ್ರಿಯ ಆಗಿರುವ ವ್ಯಕ್ತಿಗಳ ಕುರಿತು ಹೆಮ್ಮೆಯ ಮಾತುಗಳನ್ನಾಡುವ ವ್ಯಕ್ತಿತ್ವ ಇವರದು. ಇನ್ನು ದೇಶದ ಎಲ್ಲ ಕಡೆಗೆ ಇರುವಂತೆ ಬಿಹಾರದಲ್ಲಿಯೂ ಸಹ
ಜಾತಿಯ ಸಮೀಕರಣ ಮುಂಚೂಣಿಯಲ್ಲಿದ್ದು, ಬಹುಸಂಖ್ಯಾತ ಯಾದವ ಮತಗಳು ಸರಾಸಾಗಟವಾಗಿ ಲಾಲು ಪ್ರಸಾದ್ ನೇತೃತ್ವದ ಆರ್‌ಜೆಡಿ ಪಕ್ಷಕ್ಕೆ ಹೋದರೆ, ಮೇಲ್ಜಾತಿಯ ಮತ್ತು ಕೆಲವು ಒಬಿಸಿ ಮತಗಳು ಬಿಜೆಪಿಗೆ ಹೋಗುತ್ತವೆ. ನಿತೀಶ್ ಕುಮಾರ್ ಅವರ ಪಕ್ಷಕ್ಕೆ ಕುರುಮಿ ಸಹಿತ ಇತರ ಹಿಂದುಳಿದ ವರ್ಗಗಳ ಮತ ಬ್ಯಾಂಕ್ ಇದ್ದು ಅಲ್ಲದೆ ದಲಿತರ ಕೆಲವು ಮತಗಳು ಸಹ ಬರುತ್ತವೆ. ಆದರೆ ಇತ್ತೀಚೆಗೆ ಬಿಜೆಪಿ ಜೊತೆ ಗುರುತಿಸಿಕೊಂಡ ಕಾರಣ ಸಾಕಷ್ಟು ಅಲ್ಪಸಂಖ್ಯಾತ ಮತಗಳನ್ನು ಕಳೆದುಕೊಂಡಿರುವ ಜೆಡಿಯು ಮತ್ತೆ ಅಲ್ಪಸಂಖ್ಯಾತ ಮತಗಳನ್ನು ಗಳಿಸಲು ಕಾಂಗ್ರೆಸ್ ಹಾಗೂ ಆರ್ ಜೆ ಡಿ ಜೊತೆ ಮೈತ್ರಿ ಮಾಡಿಕೊಂಡಂತೆ ಕಾಣುತ್ತದೆ.

ಇಲ್ಲಿ ಇನ್ನೊಂದು ಮುಖ್ಯವಾದ ವಿಚಾರವೇನೆಂದರೆ ಕಳೆದ ಚುನಾವಣೆಯಲ್ಲಿ ಜೆಡಿಎಸ್ 45 ಹಾಗೂ ಬಿಜೆಪಿಗೆ 77 ಸೀಟುಗಳು ಸಿಕ್ಕಾಗ ಬಿಜೆಪಿಯು ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದು ಮುಖ್ಯಮಂತ್ರಿ ಸ್ಥಾನ
ತಮಗೆ ಇಷ್ಟವಿಲ್ಲದ್ದು ಮತ್ತು ಒತ್ತಾಯದಿಂದ ಆಗಿರುದೆಂದು ನಿತೀಶ್ ಕುಮಾರ್ ಅವರು ಆರೋಪಿಸಿದ್ದಾರೆ. ಹಾಗಿದ್ದರೆ ಬಿಜೆಪಿ ಜೊತೆ ಸಂಬಂಧ ಬಿಟ್ಟು ಆರ್‌ಜೆಡಿ ಪಕ್ಷಕ್ಕೆ ಮೈತ್ರಿ ಬೆಳೆಸಿದಾಗ 79 ಸೀಟುಗಳನ್ನು ಹೊಂದಿರುವ ಆರ್ ಜೆ ಡಿ ಪಕ್ಷಕ್ಕೆ ಮುಖ್ಯಮಂತ್ರಿ ಹುದ್ದೆಯನ್ನು ಯಾಕೆ ಬಿಟ್ಟು ಕೊಡಲಿಲ್ಲ ಎನ್ನುವುದು ಪ್ರಶ್ನೆಯಾಗಿದೆ.

ಇದೆಲ್ಲವನ್ನು ನೋಡಿದರೆ ನಿತೀಶ್ ಕುಮಾರ್ ಅವರಿಗೆ ವಯಕ್ತಿಕ ಪ್ರತಿಷ್ಠೆ ಹಾಗೂ ಅಧಿಕಾರ ಮುಖ್ಯವಾಗಿದೆ ಎಂದೆನಿಸುತ್ತದೆ. ಇನ್ನು ಪ್ರತಿ ಸಲ ರಾಜಕೀಯ ಮೈತ್ರಿಕೂಟ ಹಾಗೂ ಸರಕಾರಗಳು ಬದಲಾದಾಗ ಅವುಗಳ ನೀತಿಯಲ್ಲಿಯೂ ಬದಲಾಗಿ ಅಭಿವೃದ್ಧಿಯ ಕಾರ್ಯಕ್ರಮಗಳಲ್ಲಿ ಬದಲಾವಣೆ ಬಂದು ಅಭಿವೃದ್ಧಿ ಕಾರ್ಯಕ್ರಮಗಳು ಕುಂಠಿತವಾಗುವುದರಲ್ಲಿ ಯಾವ ಸಂಶಯ ಇಲ್ಲ. ಇನ್ನು ಕಳೆದ 28 ವರ್ಷಗಳಲ್ಲಿ ಎಂಟು ಬಾರಿ ಪ್ರಮಾಣ ವಚನವನ್ನು ಸ್ವೀಕರಿಸಿದ ನಿತೀಶ್ ಕುಮಾರ್ ಅವರ ಸಾಧನೆಯನ್ನು ನೋಡಿದಾಗ ಬಿಹಾರ ಅಭಿವೃದ್ಧಿ ಸಾಧಿಸಿದಕ್ಕಿಂತ ಹಿಂದುಳಿದ ರಾಜ್ಯವಾಗಿ ಉಳಿದಿರುವುದೇ ದುರದೃಷ್ಟಕರವಾಗಿದೆ. ಇನ್ನಾದರೂ ಬಿಹಾರದ ಜನತೆ ತ್ರಿಶಂಕು ವಿಧಾನಸಭೆಗೆ ಮತ್ತು” ಬದಲುರಾಮ್ “ನಿತೀಶ್ ಕುಮಾರ್ ಅವರ ಪಕ್ಷದ ಬದಲು ಯಾವುದಾದರೂ ಒಂದು ಪಕ್ಷಕ್ಕೆ ಬಹುಮತ ಕೊಟ್ಟರೆ ಸ್ಥಿರವಾದ ಸರ್ಕಾರ ಬಂದು ಬಿಹಾರ ಅಭಿವೃದ್ಧಿಯಾಗುತ್ತದೆಂದು ಆಶಿಸೋಣ.

Leave a Reply

Your email address will not be published. Required fields are marked *